ಹುಬ್ಬಳ್ಳಿ: ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಕುರಿತ ವಿವಾದದ ಬಗ್ಗೆ ಅವರು ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. ಆ ದಿನ ತಾವು ಮಾತನಾಡಲು ಕಾರಣವೇ ಪೈರಸಿ ವಿರುದ್ಧ ಬಂದ ಮಾಹಿತಿ ಎಂದು ಸುದೀಪ್ ಹೇಳಿದ್ದಾರೆ.
“ಆ ದಿನ ವೇದಿಕೆಗೆ ಏರುವ ಮೊದಲು ನನಗೆ ಒಂದು ಫೋನ್ ಕರೆ ಬಂದಿತ್ತು. ದುಡ್ಡಿಗಾಗಿ ಅಲ್ಲ, ನಿಮ್ಮ ಸಿನಿಮಾವನ್ನೇ ಹಾಳು ಮಾಡಬೇಕು ಎಂಬ ಉದ್ದೇಶದಿಂದ ಪೈರಸಿ ಮಾಡಲು ಸಂಚು ನಡೆಯುತ್ತಿದೆ ಎಂದು ತಿಳಿಸಲಾಯಿತು. ಅದರ ವಿರುದ್ಧ ನಾನು ನಿಲ್ಲದೇ ಹೋದರೆ ಮತ್ತೆ ಯಾರು ನಿಲ್ಲಬೇಕು?” ಎಂದು ಸುದೀಪ್ ಹೇಳಿದ್ದಾರೆ.
ತಾವು ಆ ಮಾತು ಹೇಳಿದ್ದು ಯಾರಿಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆವೇಶದಲ್ಲಿ ಮಾತನಾಡುವವನು ನಾನಾಗಿದ್ದರೆ ಈಗಾಗಲೇ ಅನೇಕ ವಿವಾದಗಳಲ್ಲಿ ಸಿಲುಕುತ್ತಿದ್ದೆ. ಬೇರೆ ನಟರ ಸಿನಿಮಾಗಳಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ನನ್ನ ಹೆಸರು ಹೇಳಿ ಮಾತನಾಡಿದರೆ ಮಾತ್ರ ನಾನು ಪ್ರತಿಕ್ರಿಯೆ ಕೊಡುತ್ತೇನೆ” ಎಂದಿದ್ದಾರೆ.
ಪೈರಸಿ ವಿರುದ್ಧ ತಮ್ಮ ಹೋರಾಟದ ಬಗ್ಗೆ ಮಾತನಾಡಿದ ಸುದೀಪ್, “ವಿವಾದ ಮಾಡಲು ನಾನು ಬಂದಿಲ್ಲ. ಪೈರಸಿ ವಿರುದ್ಧ ನಾವು ಪ್ರಯತ್ನ ಮಾಡುತ್ತಿದ್ದೇವೆ. ಈಗಲೇ ಎಲ್ಲವನ್ನೂ ಹೇಳಲ್ಲ. ಯಶಸ್ವಿಯಾದರೆ ಪೈರಸಿ ಜಾಲವನ್ನು ಸುಮಾರು 80 percent ಮಟ್ಟಿಗೆ ಕಡಿಮೆ ಮಾಡಬಹುದು. ಇದಕ್ಕಾಗಿ ಸರ್ಕಾರದ ದೊಡ್ಡ ದೊಡ್ಡ ವ್ಯಕ್ತಿಗಳ ಸಹಾಯ ಕೇಳಿದ್ದೇವೆ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.



