ಮೈಸೂರು: ಮೈಕೊರೆಯುವ ಚಳಿಯ ನಡುವೆಯೂ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನದ ಕಾವೇರಿ ಜೋರಾಗಿಯೇ ಹರಿಯುತ್ತಿದೆ.
ಜನವರಿ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಗೆ ಸಹಿ ಹಾಕಲಿರುವ ಹೊತ್ತಲ್ಲೇ, ನಾಯಕತ್ವ ಬದಲಾವಣೆ ನಿರೀಕ್ಷೆಯಲ್ಲಿ ಡಿಕೆ ಶಿವಕುಮಾರ್ ಬಣ ಕಾದು ಕುಳಿತಿದೆ. ಈ ನಡುವೆ ಸಿದ್ದರಾಮಯ್ಯಗೆ ಬಲ ತುಂಬುವ ಉದ್ದೇಶದಿಂದ ಅವರ ತವರು ಜಿಲ್ಲೆಯಲ್ಲೇ ಅಹಿಂದ ಕಹಳೆ ಮೊಳಗಲು ಸಜ್ಜಾಗಿದೆ.
ಜನವರಿ 25ರಂದು ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಬದಲಾವಣೆ ಆಗಬಾರದು ಎಂಬ ಸಂದೇಶವನ್ನು ರಾಜಕೀಯವಾಗಿ ಬಲವಾಗಿ ತಲುಪಿಸುವ ಉದ್ದೇಶ ಈ ಸಮಾವೇಶದ ಹಿಂದಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಈಗಾಗಲೇ ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.
ಅಹಿಂದ ಸಮಾವೇಶಕ್ಕೆ ಸುಮಾರು 15 ರಿಂದ 20 ಸಾವಿರ ಜನರನ್ನು ಸೇರಿಸುವ ಪ್ಲ್ಯಾನ್ ಮಾಡಲಾಗಿದೆ. ಗಮನಾರ್ಹವಾಗಿ, ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗವಹಿಸುವುದಿಲ್ಲ. ಆದರೆ ಅವರ ಬೆಂಬಲಿಗರು, ಚಿಂತಕರು, ಸಾಹಿತಿಗಳು ಮತ್ತು ಅಹಿಂದ ಪರ ಮುಖಂಡರು ಭಾಗವಹಿಸಲಿದ್ದಾರೆ.
ಇನ್ನೂ, ಅಹಿಂದ ಸಮಾವೇಶಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ಒಳ್ಳೆಯದಾಗಲಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ, “ಸಿದ್ದರಾಮಯ್ಯ ಅವರನ್ನು ಕೆಳಗಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದು, 2028ರವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಯೇ ಮುಂದುವರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಅಹಿಂದ ಸಮಾವೇಶದ ಮೂಲಕ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆಗೆ ಬ್ರೇಕ್ ಬೀಳುತ್ತದೆಯೇ ಎಂಬುದು ಈಗ ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.



