ಮೈಸೂರು: ಹುಣಸೂರು ಪಟ್ಟಣದ ಚಿನ್ನದ ಅಂಗಡಿಯಲ್ಲಿ ನಡೆದ ಭಾರಿ ದರೋಡೆ ಪ್ರಕರಣದಲ್ಲಿ ಕದ್ದ ಸುಮಾರು 10 ಕೋಟಿ ರೂ. ಮೌಲ್ಯದ 8 ಕೆಜಿ ಚಿನ್ನವನ್ನು ಆರೋಪಿಗಳು ನೇಪಾಳದಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿರುವರೂ, ಕದ್ದ ಚಿನ್ನವನ್ನು ಇನ್ನೂ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಅಂತರರಾಜ್ಯ ಕಳ್ಳರ ಜಾಲದ ಮೂಲಕ ಕದ್ದ ಚಿನ್ನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಲೇವಾರಿ ಮಾಡಲಾಗಿದೆ ಎನ್ನಲಾಗಿದೆ.
ಹೈಟೆಕ್ ತಂತ್ರಜ್ಞಾನ ಬಳಸಿ ದರೋಡೆ ನಡೆಸಿದ್ದ ಆರೋಪಿಗಳು, ಕಳ್ಳತನದಷ್ಟೇ ಚಿನ್ನ ವಿಲೇವಾರಿಗೋ ಕೂಡ ಸೂಕ್ಷ್ಮ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಹುಣಸೂರಿನಲ್ಲಿ ಕದ್ದ ಚಿನ್ನವನ್ನು ನೇಪಾಳದಲ್ಲಿ ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದರೂ, ವಿದೇಶಕ್ಕೆ ತೆರಳಿ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಕಾನೂನು ಹಾಗೂ ಪ್ರಕ್ರಿಯಾತ್ಮಕ ಅಡಚಣೆಗಳು ಎದುರಾಗಿವೆ.
ಹೀಗಾಗಿ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನವನ್ನು ಮರುಪಡೆಯುವ ಸಾಧ್ಯತೆ ಕಡಿಮೆಯಾಗಿದ್ದು, ಈ ಪ್ರಕರಣವನ್ನು ಮುಕ್ತಾಯದ ಹಂತಕ್ಕೆ ತರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.



