ಮೈಸೂರು:- ಜಿಲ್ಲೆ ಹುಣಸೂರು ತಾಲ್ಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಯೋಧನ ಪತ್ನಿಯ ಮೇಲೆ ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ನೀಲಮ್ಮ ಎಂಬ ಮಹಿಳೆ ಮೇಲೆ ಸಂಬಂಧಿಕರಾದ ರವಿ, ಅಂಕಿತ ಹಾಗೂ ರೋಷನ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ನೀಲಮ್ಮ ಅವರ ಪತಿ ಶಿವರಾಜ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಜಮ್ಮು–ಕಾಶ್ಮಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿವರಾಜ್ ಅವರು ತಮ್ಮ ಸಂಬಂಧಿ ರವಿ ಪತ್ನಿ ಲೀಲಾವತಿಗೆ 10 ಸಾವಿರ ರೂಪಾಯಿ ಸಾಲ ನೀಡಿದ್ದು, ಆ ಹಣವನ್ನು ವಾಪಸ್ಸು ನೀಡುವಂತೆ ನೀಲಮ್ಮ ಕೇಳಿದ ವೇಳೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಏಕಾಏಕಿ ಹಲ್ಲೆ ನಡೆಸಲಾಗಿದ್ದು, ನೀಲಮ್ಮ ಅವರಿಗೆ ತಲೆಗೆ ಪೆಟ್ಟು ಬಿದ್ದಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಲಮ್ಮ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ತನಿಖೆ ಕೈಗೊಂಡಿದ್ದಾರೆ.



