ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಡಿ.4ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಮಂತಾರಿಂದ ದೂರವಾದ ಬಳಿಕ ಶೋಭಿತಾ ಜೊತೆ ಡೇಟಿಂಗ್ ನಲ್ಲಿದ್ದ ನಾಗಚೈತನ್ಯ ಇದೀಗ ಹೊಸ ಜೀವನ ಆರಂಭಿಸಿದ್ದಾರೆ. ಮಗನ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ ನಾಗಾರ್ಜುನ್ ಭಾವುಕರಾಗಿದ್ದಾರೆ.
‘ನಾಗ ಚೈತನ್ಯ ಮತ್ತು ಶೋಭಿತಾ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣ. ನಾಗ ಚೈತನ್ಯಗೆ ಅಭಿನಂದನೆಗಳು. ನಮ್ಮ ಕುಟುಂಬಕ್ಕೆ ಶೋಭಿತಾಗೆ ಸ್ವಾಗತ. ನೀನು ಈಗಾಗಲೇ ನಮ್ಮ ಬದುಕಿನಲ್ಲಿ ಸಾಕಷ್ಟು ಖುಷಿ ತಂದಿರುವೆ’ ಎಂದು ಅಕ್ಕಿನೇನಿ ನಾಗಾರ್ಜುನ ಅವರು ಮದುವೆಯ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಸಪ್ತಪದಿ ತುಳಿದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆ ನಾಗಚೈತನ್ಯ ಹಾಗೂ ಶೋಭಿತಾ ಮದುವೆ ನಡೆದಿದೆ.
ಮದುವೆಯಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತ ಬಳಗದವರು ಮಾತ್ರವೇ ಪಾಲ್ಗೊಂಡಿದ್ದಾರೆ. ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣಕ್ಕೆ ಕೇವಲ 400 ಅತಿಥಿಗಳಿಗೆ ಮಾತ್ರ ಮದುವೆ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿ ಹಲವು ಗಣ್ಯರು ನವದಂಪತಿಗೆ ಶುಭಕೋರಿದ್ದಾರೆ.