ನಾಗಮಂಗಲ:– ಇತ್ತೀಚೆಗೆ ಮಂಡ್ಯ ಜಿಲ್ಲೆ ನಾಗಮಂಗಲದ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಇಡೀ ಪಟ್ಟಣದಲ್ಲಿ ಅಶಾಂತಿ ಉಂಟಾದರೆ, ಇದರಿಂದ ಹಲವು ಜನರ ಬದುಕು ಬೀದಿಗೆ ಬಂದಿದೆ.
ಸದ್ಯ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದ್ದು, ಮಂಡ್ಯ ಜಿಲ್ಲಾಡಳಿತ ಗಲಭೆಯಿಂದ ನಷ್ಟವಾಗಿರುವ ಆಸ್ತಿ ಮೌಲ್ಯವನ್ಮು ಅಂದಾಜಿಸಿದೆ.
ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಮೀಕ್ಷೆ ಮಾಡಿ ಹಾನಿಯಾದ ಕಟ್ಟಡ ಹಾಗೂ ವಸ್ತುಗಳಿಗೆ ಮೌಲ್ಯವನ್ನು ಅಂದಾಜು ಮಾಡಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ಸಂಬಂಧ ನಾಗಮಂಗಲ ತಹಶೀಲ್ದಾರ್ ನೇತೃತ್ವದಲ್ಲಿ ಪಿಡ್ಲ್ಯೂಡಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಒಂದು ತಂಡ ರಚನೆ ಮಾಡಲಾಗಿತ್ತು.
ಈ ತಂಡ ಎಸ್‌ಆರ್ ರೇಟ್ ಪ್ರಕಾರ ಹಾನಿಯ ಅಂದಾಜನ್ನು ಮಾಡಿದ್ದಾರೆ. ಎಸ್‌ಆರ್ ರೇಟ್ ಪ್ರಕಾರ ಗಲಭೆಯಿಂದ ಹಾನಿಗೆ ಒಳಗಾಗಿರುವ ಕಟ್ಟದ ಪ್ರಮಾಣ ಮೌಲ್ಯ 1.47 ಕೋಟಿ ರೂ. ಹಾಗೂ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾದ ಸರಕಿನ ಮೌಲ್ಯ 1.18 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ನೀಡಿ, ಸೂಕ್ತ ಪರಿಹಾರ ನೀಡವಂತೆ ಮಂಡ್ಯ ಡಿಸಿ ಡಾ.ಕುಮಾರ್ ಪತ್ರ ಬರೆದಿದ್ದಾರೆ.
ನಾಗಮಂಗಲ ಗಲಭೆಯಿಂದ ಅಪಾರ ಪ್ರಮಾಣ ಕಟ್ಟಡ ಹಾಗೂ ಸರಕುಗಳು ಹಾನಿಯಾಗಿವೆ. ಸರ್ಕಾರ ಈ ವರದಿಯನ್ನು ಆಧರಿಸಿ ಎಷ್ಟು ಪರಿಹಾರವನ್ನು ಘೋಷಣೆ ಮಾಡಲಿದೆಯೇ ಅನ್ನೋದನ್ನು ಕಾದುನೋಡಬೇಕಿದೆ.