ನಾಗಪ್ಪನ ಗಣಪನಿಗೆ ಬಲು ಬೇಡಿಕೆ

0
Nagappa Badigera has been a skilled hand at making Ganapatis for three decades
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇನ್ನೇನು ಗಣೇಶ ಎಲ್ಲರ ಮನೆಮನಗಳನ್ನು ಬೆಳಗಲಿದ್ದಾನೆ. ಗಣಪನಿಗೆ ಅಂತಿಮ ರೂಪ ಕೊಡುವ ಕೆಲಸ ಕೆಲವು ಕಡೆ ನಡೆದಿದ್ದರೆ, ಈಗಾಗಲೇ ಸಿದ್ಧವಾಗಿರುವ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Advertisement

ಕಳೆದ ಮೂರು ದಶಕಗಳಿಂದ ಗಣಪತಿಗಳ ತಯಾರಿಕೆಯಲ್ಲಿ ಸಿದ್ಧ ಹಸ್ತರಾಗಿರುವವರು ಇಲ್ಲಿಗೆ ಸಮೀಪದ ಕೋಟುಮಚಗಿಯ ನಾಗಪ್ಪ ಬಡಿಗೇರ. ಅವರ ಕೈಚಳಕದಲ್ಲಿ ತಯಾರಾಗುವ ಗಣಪತಿಗಳಿಗೆ ಜಿಲ್ಲೆಯಾದ್ಯಂತ ಬಲು ಬೇಡಿಕೆ ಇದೆ.

ಗಣೇಶ ಚತುರ್ಥಿಗೂ ಮೂರು ನಾಲ್ಕು ತಿಂಗಳುಗಳ ಮೊದಲೇ ಇವರ ಗಣಪತಿ ತಯಾರಿ ಶುರುವಾಗುತ್ತದೆ. ಮಣ್ಣು ತರುವದರಿಂದ ಹಿಡಿದು, ಅದನ್ನು ಜರಡಿ ಹಿಡಿದು ಹದ ಮಾಡುವವರೆಗೂ ಅವರಿಗೆ ವಿಶ್ರಾಂತಿ ಎಂಬುದೇ ಇರುವುದಿಲ್ಲ. ಮನೆಯಲ್ಲಿ ನಾಗಪ್ಪ, ತಮ್ಮ ಮಲ್ಲಪ್ಪ ಮತ್ತು ಮಗ ಓಂಕಾರ ಅವರಲ್ಲದೆ ಮನೆಯ ಹೆಣ್ಣು ಮಕ್ಕಳೂ ಸಹ ಈ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಒಂಬತ್ತು ಇಂಚಿನ ಎತ್ತರದ ಗಣಪ್ಪನಿಂದ ಹಿಡಿದು ನಾಲ್ಕು ಅಡಿ ಎತ್ತರದ ಗಣಪತಿಗಳನ್ನೂ ಇವರು ತಯಾರು ಮಾಡುತ್ತಾರೆ.

Nagappa Badigera has been a skilled hand at making Ganapatis for three decades

ಎಲ್ಲ ಮೂರ್ತಿಗಳೂ ಜೀವಕಳೆ ಮತ್ತು ದೈವಕಳೆಗಳಿಂದ ಸುಂದರವಾಗಿ ಕಂಗೊಳಿಸುವುದರಿಂದ ಗದಗ ಜಿಲ್ಲೆಯಲ್ಲದೆ ಪಕ್ಕದ ಕೊಪ್ಪಳ ಜಿಲ್ಲೆಯಲ್ಲಿಯೂ ಇವರ ಗಣಪತಿಗಳು ಪ್ರಸಿದ್ಧಿ ಪಡೆದಿವೆ.

ಈ ಮೂರು ದಶಕಗಳಲ್ಲಿ ನಾಗಪ್ಪ ತಯಾರಿಸಿದ್ದು ಮಣ್ಣಿನ ಗಣಪತಿಗಳನ್ನೆ. ಒಂದು ಕಾಲದಲ್ಲಿ ಬಹು ಬೇಡಿಕೆ ಹೊಂದಿದ್ದ ಪಿಒಪಿ ಗಣಪತಿಗಳತ್ತ ಒಂದಿಷ್ಟೂ ಗಮನ ಹರಿಸದ ನಾಗಪ್ಪ, ಅವುಗಳನ್ನೂ ಮೀರಿಸುವಂತೆ ಮಣ್ಣಿನಲ್ಲಿಯೇ ಗಣಪತಿಗಳನ್ನು ತಯಾರಿಸಿ ಎಲ್ಲರ ಮನ ಗೆದ್ದಿದ್ದಾರೆ.

ನಾಗಪ್ಪ ಬಡಿಗೇರ ಅವರ ಗಣಪತಿಗಳು ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಜಕ್ಕಲಿ, ರೋಣ ಮುಂತಾದ ಊರುಗಳಲ್ಲದೆ ಪಕ್ಕದ ಯಲಬುರ್ಗಾ ತಾಲೂಕಿನ ಬಿನ್ನಾಳ, ತೊಂಡಿಹಾಳ ಮುಂತಾದ ಕಡೆಗಳಲ್ಲಿಯೂ ಭಾರೀ ಬೇಡಿಕೆಯನ್ನು ಹೊಂದಿವೆ.

ಹುಬ್ಬಳ್ಳಿ ಹತ್ತಿರದ ಅಂಚಟಗೇರಿಯಿಂದ ಒಂದು ಲೋಡ್ ಮಣ್ಣನ್ನು ತರುವ ಇವರಿಗೆ ಪ್ರತಿ ವರ್ಷ ಮಣ್ಣಿನ ಬೆಲೆ ಮತ್ತು ಸಾರಿಗೆ ವೆಚ್ಚ ದುಬಾರಿಯಾಗುತ್ತಿರುವುದರಿಂದ ತಯಾರಿಕಾ ವೆಚ್ಚವೂ ಏರುತ್ತಿದೆ. ಬಣ್ಣಗಳೂ ಸಹ ಈಗ ಮೊದಲಿಗಿಂತ ತುಟ್ಟಿಯಾಗಿರುವದರಿಂದ ಗಣಪ್ಪನಿಗೆ ಬಣ್ಣ ಹಚ್ಚುವುದೂ ಕೂಡ ದುಬಾರಿ ಎನ್ನಿಸುತ್ತಿದೆ. ಆದರೂ ಕಳೆದ ಮೂರು ದಶಕಗಳಿಂದ ನಮ್ಮನ್ನು ನಂಬಿರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗಬಾರದು ಎಂದು ನಾವು ಈ ಗಣಪನ ತಯಾರಿ ಕಾರ್ಯವನ್ನು ಮುಂದುವರೆಸಿದ್ದೇವೆ ಎನ್ನುತ್ತಾರೆ ನಾಗಪ್ಪ ಬಡಿಗೇರ.


Spread the love

LEAVE A REPLY

Please enter your comment!
Please enter your name here