ವಿಜಯಸಾಕ್ಷಿ ಸುದ್ದಿ, ಡಂಬಳ: ನಾಗರ ಪಂಚಮಿ ಅಂಗವಾಗಿ ಡಂಬಳ ಹೋಬಳಿಯ ಕದಾಂಪುರ, ಪೇಠಾ ಆಲೂರ, ಮೇವುಂಡಿ, ಬರದೂರ, ಹಳ್ಳಿಕೇರಿ, ಹಳ್ಳಿಗುಡಿ, ಡೋಣಿ, ಡೋಣಿ ತಾಂಡ, ಯಕ್ಲಾಸಪೂರ, ಹೈತಾಪೂರ, ಮುರಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ನಾಗಪ್ಪನ ಕಟ್ಟೆಗೆ ಹಾಲೆರೆಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.
ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮನೆಯಲ್ಲಿ ಹೋಳಿಗೆ, ಖರ್ಚಿಕಾಯಿ, ಎಳ್ಳುಂಡಿ ಸಿದ್ದಪಡಿಸಿ ಮಹಿಳೆಯರೆಲ್ಲ ಸೇರಿ ಸಮೀಪದ ನಾಗಪ್ಪ ದೇವಸ್ಥಾನಕ್ಕೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲೆರೆದರು. ವಿಶೇಷವಾಗಿ ರೈತ ಮಹಿಳೆಯರು ವರ್ಷಪೂರ್ತಿ ಕೃಷಿಯಲ್ಲಿ ತೋಡಗಿದ್ದಾಗ ಯಾವುದೇ ವಿಷ ಜಂತುಗಳಿಂದ ಅಪಾಯವಾಗದಿರಲಿ, ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ, ನಾಡಿನೆಲ್ಲೆಡೆ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆಗಳನ್ನು ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸುವುದು ನಂಬಿಕೆಯಾಗಿದೆ. ಹಬ್ಬದ ಅಂಗವಾಗಿ ಮನೆಯಂಗಳದ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿ ಮಕ್ಕಳು ಸರದಿಯಂತೆ ಜೋಕಾಲಿ ಆಡುತ್ತಾ ಸಂಭ್ರಮಿಸಿದರು.