ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಹಾಲಕೆರೆ ಶಾಖಾ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ತಿಂಗಳ ಪರ್ಯಂತ ನಡೆದಿರುವ ದ್ಯಾಂಪೂರ ಚನ್ನಕವಿ ವಿರಚಿತ ನಾಲ್ವತವಾಡ ಶ್ರೀ ವೀರೇಶ್ವರ ಶಿವಶರಣರ ಪುರಾಣ ಪ್ರವಚನದಲ್ಲಿ ಬರುವ ಮದುವೆ ಸನ್ನಿವೇಶ ಸೋಮವಾರ ಅದ್ದೂರಿಯಾಗಿ ಜರುಗಿತು.
ಮದುವೆ ನಿಮಿತ್ತ ರವಿವಾರ ಮತ್ತು ಸೋಮವಾರ ಊರಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ಊರಿನ ಅರ್ಧ-ಅರ್ಧ ಭಾಗದ ಭಕ್ತವೃಂದ ಗಂಡು ಮತ್ತು ಹೆಣ್ಣಿನ ಕಡೆಯವರಾಗಿ, ಬಂಧು-ಬಾಂಧವರಾಗಿ ಭಾಗವಹಿಸಿ ವಿಶಿಷ್ಟತೆ ಮೆರೆದರು. ಮದುವೆ ದಿಬ್ಬಣ, ಮಾಂಗಲ್ಯ ಧಾರಣೆ, ಅಕ್ಷತೆಯಿಂದ ಹಿಡಿದು ವಿವಾಹ ಸಮಾರಂಭದ ಎಲ್ಲ ಕಾರ್ಯಕ್ರಮಗಳು ಅತ್ಯಂತ ವಿಧಿವತ್ತಾಗಿ ಜರುಗಿದವು. ಈ ಸನ್ನಿವೇಶಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು.
ಊರಿನ ಶ್ರೀ ವೀರಭದ್ರೇಶ್ವರ ಭಾಗದ ಸದ್ಭಕ್ತರು ಗಂಡಿನ ಕಡೆಯವರಾಗಿ ರವಿವಾರ ಸಂಜೆ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನಕ್ಕೆ ಕನ್ಯಾ ನೋಡಲು ಆಗಮಿಸಿದ್ದರು. ಬಳಿಕ ಅವರನ್ನು ಹಳ್ಳಿಯ ಪದ್ಧತಿಯಂತೆ ಹೆಣ್ಣಿನ ಕಡೆಯವರು ಬರಮಾಡಿಕೊಂಡರು. ನಂತರ ಉತ್ತರ ಮತ್ತು ಪೂರ್ವಾಭಿಮುಖವಾಗಿ ವಿಶೇಷವಾಗಿ ಅಲಂಕರಿಸಲಾಗಿದ್ದ ಎರಡು ಗೊಂಬೆಗಳಿಗೆ ಹೆಸರುಗಳನ್ನಿಟ್ಟು ಕೂಡ್ರಿಸಿದರು. ಸಾಂಪ್ರದಾಯಿಕವಾಗಿ ನಾಲ್ವತವಾಡದ ವರ ಶ್ರೇಷ್ಠ ವೀರೇಶ್ವರ ಶರಣರಿಗೆ, ಸಿಂಗರಿಸಿದ್ದ ವಧು ಶರಣೆ ಗುರುದೇವಿ ತಾಯಿ ಕನ್ಯಾಮಣಿಯನ್ನು ತೋರಿಸಿದರು. ಆಗ ಅಲ್ಲಿ ಸೇರಿದ್ದ ವರನ ಕಡೆಯ ಗುರು-ಹಿರಿಯರು ವರೋಪಚಾರ ಮಾತನಾಡಿ ಕನ್ಯಾದಾನದ ಮಾತುಕತೆಗೆ ಆಹ್ವಾನ ನೀಡಿದರು.
ಸೋಮವಾರ ಸಂಜೆ ಊರಿನ ಅರ್ಧ ಭಾಗದ ಭಕ್ತರು ವಧುವಿನ ಕಡೆಯವರಾಗಿ ವಿವಿಧ ವೇಷಭೂಷಣಗಳನ್ನು ಧರಿಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಭಕ್ತಿಭಾವದಿಂದ ಸಂಪ್ರದಾಯದಂತೆ ಕನ್ಯಾದಾನ ಮಾಡಿದರು. ವಿವಾಹಕ್ಕೆ ವಧುವಿಗೆ 5 ಸೀರೆ, 9 ಖಣಿ, ತಾಳಿ, ಮೂಗುತಿ, ಮಡಿ, ಉಂಗುರ ಮತ್ತು ಕಾಲುಂಗರವನ್ನು ವರನ ಕಡೆಯ ಭಕ್ತರು ಹಾಗೂ ವರನಿಗೆ ಒಂದು ಜೋಡೆ ದೋತರ, ಪ್ಯಾಂಟ್, ಶರ್ಟ್, ಬಾಂಡೆ ಸಾಮಾನುಗಳನ್ನು ವಧುವಿನ ಕಡೆಯ ಭಕ್ತರು ಕಾಣಿಕೆಯ ರೂಪದಲ್ಲಿ ನೀಡಿದರು.
ರಾತ್ರಿ 8ಕ್ಕೆ ವಧುವಿನ ಕಡೆಯ ಬಂಧುವಾಗಿ ಹಿರಿಯರಾದ ಶೇಖಣ್ಣವರ ಮೇಟಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಭಕ್ತರು ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಧು-ವರರನ್ನು ವಾದ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ಅಕ್ಷರಶಃ ಹೆಣ್ಣಿನ ವೇಷಭೂಷಣ ಧರಿಸಿದ್ದ ವಿನಾಯಕ ಅಥಣಿ, ವೀರೇಶ ನರೇಗಲ್ಲ ಕಣ್ಮನ ಸೆಳೆದರು.
ವಿಶೇಷ ಮಂಟಪದಲ್ಲಿ ಅಲಂಕರಿಸಲಾಗಿದ್ದ ವರ ವೀರೇಶ್ವರ ಶರಣ, ವಧು ಗುರುದೇವಿ ಮಾತೆ ಗೊಂಬೆಗಳಿಗೆ ದೇವರ ಸ್ವರೂಪ ಎಂದು ಭಾವಿಸಿ ಸಾಂಪ್ರದಾಯಿಕವಾಗಿ ಶರಣಯ್ಯ ಹಿರೇಮಠ ನೇತೃತ್ವದಲ್ಲಿ ವೇ.ಮೂ. ಗುರುಲಿಂಗಮೂರ್ತಿ ಮಂಟಯ್ಯನಮಠ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಮಂತ್ರಪಠಣದೊಂದಿಗೆ ಮದುವೆ ಕಾರ್ಯ ನೆರವೇರಿಸಲಾಯಿತು. ನೆರದಿದ್ದ ಅಪಾರ ಸಂಖ್ಯೆಯ ಭಕ್ತರು ಮದುಮಕ್ಕಳಿಗೆ ಅಕ್ಷತೆ ಹಾಕಿ ಶುಭ ಕೋರಿದರು.
ಹೆಣ್ಣಿನ ಕಡೆಯವರಾಗಿ ಮಲ್ಲಿಕಾರ್ಜುನ ಮೇಟಿ ದಂಪತಿಗಳು, ಗಂಡಿನ ಕಡೆಯವರಾಗಿ ಸುಭಾಷ್ ಕಡಗದ ದಂಪತಿಗಳು ವಿಳ್ಲೆ ಕಾರಣ, ಬಾಸಿಂಗ ಕಟ್ಟುವ, ಉಂಗುರ ಮುಡಿಸುವ, ಮಾಂಗಲ್ಯ ಧಾರಣೆ ಕಾರ್ಯಗಳನ್ನು ನೆರವೇರಿಸಿದರು.
ಈ ವಿವಾಹ ಸಮಾರಂಭದ ನಿಮಿತ್ತ ಸದ್ಭಕ್ತರು ಕೈಗೊಂಡ ಗಂಡು-ಹೆಣ್ಣಿನ ಗೊಂಬೆಗಳ ಮದುವೆ ಕಾರ್ಯ ಮೇಲ್ನೋಟಕ್ಕೆ ನಿಜವಾಗಿಯೂ ನಡೆಯುತ್ತಿದೆಯೋ ಎಂಬಂತೆ ಎನಿಸಿತು. ಇದನ್ನು ನೋಡಲೆಂದು ಪರ ಊರುಗಳಿಂದ ಭಕ್ತರು ತಂಡೋಪತಾಗಿ ಶ್ರೀಮಠಕ್ಕೆ ಆಗಮಿಸಿದ್ದರು.
ವೇ.ಮೂ. ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರೀಯವರು ಮಾತನಾಡಿ,”ಯುವ ಪೀಳಿಗೆಗೆ ಒಳ್ಳೆಯ ಸಂದೇಶ – ನಾಲ್ವತವಾಡ ವೀರೇಶ್ವರ ಶಿವಶರಣರು ಬದುಕಿನ ಪರಿ ಆದರ್ಶ. ಇದು ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇಂದಿನ ಯಾಂತ್ರಿಕ ಹಾಗೂ ಟಿವಿ, ಮೊಬೈಲ್ ಹಾವಳಿಯಿಂದ ಪುರಾಣ ಪುಣ್ಯಕಥೆಗಳು, ಕೀರ್ತನೆಗಳು ನಶಿಸಿ ಹೋಗುತ್ತಿರುವುದು ವಿಷಾದದ ಸಂಗತಿ. ಈ ಅನ್ನದಾನೇಶ್ವರ ಶ್ರೀಮಠದಲ್ಲಿ ಪ್ರತಿ ವರ್ಷ ಮಹಾತ್ಮರ ಪುರಾಣ ಪ್ರವಚನ ನಡೆಸುವದರಿಂದ ನಮ್ಮ ಮುಂದಿನ ಪೀಳಿಗೆಗೆ ಆಧ್ಯಾತ್ಮದ ಜ್ಞಾನ ತಿಳಿಸುವ ಉದ್ದೇಶ ಹೊಂದಲಾಗಿದೆ” ಎಂದು ತಿಳಿಸಿದರು.



