ವಿಜಯಸಾಕ್ಷಿ ಸುದ್ದಿ, ಗದಗ:: ಗದಗ ರೈಲ್ವೆ ನಿಲ್ದಾಣಕ್ಕೆ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 19 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ಬಾಬು ಬಾಕಳೆ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದಗ ವೀರೇಶ್ವರ ಪುಣ್ಯಾಶ್ರಮವು ಅಂಧರು, ಅನಾಥರು ಮತ್ತು ಬಡ ಮಕ್ಕಳ ಉನ್ನತಿಗಾಗಿ ಸಮರ್ಪಿತವಾದ ಸಂಸ್ಥೆಯಾಗಿದೆ. ಯಾವುದೇ ಸರ್ಕಾರಿ ಅನುದಾನದ ಸಹಾಯವಿಲ್ಲದೆ ನಡೆಯುತ್ತಿರುವ ಈ ಆಶ್ರಮವು ಸಂಗೀತ ಮತ್ತು ಲಲಿತಕಲೆಗಳಲ್ಲಿ ಸಾವಿರಾರು ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು.
ಸೆ. 19 ರಂದು ನಗರದ ಭೂಮರೆಡ್ಡಿ ಸರ್ಕಲ್‌ನಲ್ಲಿರುವ ಶ್ರೀ ಪುಟ್ಟರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ರೋಟರಿ ಸರ್ಕಲ್, ಗಾಂಧಿ ಸರ್ಕಲ್, ಮಹೇಂದ್ರಕರ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬಸವೇಶ್ವರ ವೃತ್ತ, ಚೌಡಿ ಕೂಟ ಮತ್ತು ಮುಳಗುಂದ ನಾಕಾ ಮಾರ್ಗವಾಗಿ ಪಾದಯಾತ್ರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಭಜಂತ್ರಿ, ಶಿವಲಿಂಗಯ್ಯ ಶಾಸ್ತ್ರಿ, ಪ್ರವೀಣ ಹಬೀಬ, ರಾಣಿ ಚಂದಾವರಿ, ಬಸಯ್ಯ ನಂದಿಕೋಲಮಠ, ಭೀಮ ಖಾಟಿಗರ, ಕಿರಣ ಪಟ್ಟಣಶೆಟ್ಟಿ, ಶಿವಕುಮಾರ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.