ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದ ರೈತರ ಮತ್ತು ಇತರೆ ಕೆಲವು ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹೆಸರು ದಾಖಲಾಗಿರುವ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಆತಂಕ ಸೃಷ್ಟಿಯಾಗಿದ್ದು, ರೈತರ ಉಳುಮೆ ಮಾಡುವ ಭೂಮಿಗಳ ಮೇಲೆ ವಕ್ಫ್ ಹೆಸರು ದಾಖಲಾಗಿರುವದು ಸುದ್ದಿಯಾಗುತ್ತಿದ್ದಂತೆ ಇದೀಗ ಲಕ್ಷ್ಮೇಶ್ವರದ ಶತಮಾನ ಕಂಡಿರುವ ಪ್ರಸಿದ್ಧ ಗರಡಿಮನೆ ಈಗ ವಕ್ಫ್ ಆಸ್ತಿಯಾಗಿ ಪರಿವರ್ತನೆಯಾಗಿರುವ ಆತಂಕದಲ್ಲಿ ಪೈಲ್ವಾನರು ಇದ್ದು, ಆಸ್ತಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವದರಿಂದ ಆಸ್ತಿ ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
ಪಟ್ಟಣದ ಪುರಸಭೆ ಹತ್ತಿರ ಇರುವ ಸಾರ್ವಜನಿಕರ ಗರಡಿಮನೆಯಲ್ಲಿ ಅನೇಕ ಹೆಸರಾಂತ ಪೈಲ್ವಾನರು ಆಡಿ ಹೋಗಿದ್ದಾರೆ. ಆದರೆ ಗರಡಿಮನೆ ಇತ್ತೀಚೆಗೆ ಪಾಳು ಬಿದ್ದಿದ್ದು, ಗರಡಿಮನೆಯ ಅಭಿವೃದ್ಧಿಗೂ ಅಡ್ಡಿಯಾಗಿದೆ.
ಸಾರ್ವಜನಿಕ ಗರಡಿಮನೆ ಎಂದು ಇರುವ ಆಸ್ತಿಯ ಹೆಸರು ವಕ್ಫ್ ಆಸ್ತಿ ಎಂದು ಬದಲಾಗಿದ್ದು, 23 ಡಿಸೆಂಬರ್ 2019ಕ್ಕೆ ಜಿಲ್ಲಾ ವಕ್ಫ್ ಅಧಿಕಾರಿಗಳು ಪತ್ರದ ವರದಿ ಪ್ರಕಾರ ಹಿಂದಿನ ಹೆಸರು ಕಡಿಮೆ ಮಾಡಿ ವಕ್ಫ್ ಆಸ್ತಿ ಎಂದು ಹೆಸರು ದಾಖಲು ಮಾಡಿದ್ದಾರೆ. ಸಿ.ಟಿ. ಸರ್ವೇ ನಂ. 4065 ಸಾರ್ವಜನಿಕ ಗರಡಿಮನೆ ಎಂದು 2019ರವರೆಗೂ ದಾಖಲಾಗಿತ್ತು. ಇದೀಗ ವಕ್ಫ್ ಆಸ್ತಿ ಎಂದು ಹೆಸರು ಬದಲಾವಣೆಯಾಗಿದ್ದರಿಂದ ನ್ಯಾಯಾಲಯದ ಮೆಟ್ಟಿಲೇರುವಚಿತಾಗಿದೆ. ಗರಡಿಮನೆ ಅಭಿವೃದ್ಧಿಪಡಿಸಲು ಮುಂದಾದಾಗ ಆಸ್ತಿ ಹೆಸರು ಬದಲಾವಣೆಯಾಗಿದ್ದು ಬೆಳಕಿಗೆ ಬಂದಿದೆ.
ಅದೇ ರೀತಿ ಪಟ್ಟಣದ ಕೆಲವು ರೈತರ ಉಳುಮೆ ಮಾಡುವ ಜಮೀನುಗಳ ಮೇಲೆಯೂ ಸಹ ವಕ್ಫ್ ಬೋರ್ಡ್ ಹೆಸರು ದಾಖಲಾಗಿದೆ. ಲಕ್ಷ್ಮೇಶ್ವರ ತಾಲೂಕಿನಾದ್ಯಂತ ನೂರಾರು ಎಕರೆ ಭೂಮಿಯ ಮೇಲೆ ವಕ್ಫ್ ಮಂಡಳಿ ಹೆಸರು ದಾಖಲಾಗಿರುವದು ಇದೀಗ ಬೆಳಕಿಗೆ ಬರುತ್ತಿದ್ದು, ರೈತರು, ಸಾರ್ವಜನಿಕರು ಉತಾರ ಪಡೆಯಲು ಮುಂದಾಗುತ್ತಿದ್ದಾರೆ.
ಸಾರ್ವಜನಿಕ ಗರಡಿಮನೆಯ ಆಸ್ತಿಯಲ್ಲಿ ಸರ್ವಧರ್ಮ ಒಳಗೊಂಡ ಕಮಿಟಿ ಇದ್ದು, ಈ ಪುರಾತನ ಆಸ್ತಿಯನ್ನು ಉಳಿಸಿಕೊಳ್ಳಲು ಕಳೆದ ನಾಲ್ಕೈದು ವರ್ಷಗಳಿಂದ ಕಾನೂನು ಹೋರಾಟವನ್ನು ಮಾಡುತ್ತಿದ್ದಾರೆ. ವಕ್ಫ್ ಆಸ್ತಿ ಎಂದು ನಮೂದಾಗಿರುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎನ್ನುತ್ತಾರೆ ಸಾರ್ವಜನಿಕ ಗರಡಿಮನೆ ಪಂಚರಾದ ಮಹದೇವಪ್ಪ ಕಟ್ಟಿಮನಿ, ಅನಿಲ ಮುಳಗುಂದ.