ಬೆಂಗಳೂರು: ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೊಸ ಅನುಮಾನಗಳು ಮೂಡುತ್ತಿವೆ. ಆತ್ಮಹತ್ಯೆಗೆ ಮುನ್ನ ಅವರು ಯಾರೊಂದಿಗೆ ಮಾತನಾಡಿದ್ದರು? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ದರಾ? ಎಂಬ ಅಂಶಗಳ ಬಗ್ಗೆ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ ಎಂಡಿ ನೀಡಿದ ದೂರಿನ ಪ್ರಕಾರ, ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಬೇಕೆಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಗನ್ಮ್ಯಾನ್ಗೆ ಯಾರನ್ನೂ ಒಳಗೆ ಬಿಡದಂತೆ ಸೂಚಿಸಿದ್ದರು. ಆದರೆ, ಆತ್ಮಹತ್ಯೆಗೆ ಮುನ್ನ ನಿಜಕ್ಕೂ ತಾಯಿಯೊಂದಿಗೆ ಮಾತನಾಡಿದರೋ ಅಥವಾ ಬೇರೆ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದರೋ ಎಂಬುದು ಸದ್ಯ ಪೊಲೀಸರ ಪ್ರಮುಖ ಅನುಮಾನವಾಗಿದೆ.
ಈ ಹಿನ್ನೆಲೆಯಲ್ಲಿ ರಾಯ್ ಬಳಿಯಿದ್ದ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಸೇರಿ ಎರಡು ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದು ಸಿಐಡಿ ಸೈಬರ್ ಸೆಲ್ಗೆ ರವಾನಿಸಿದ್ದಾರೆ. ಎರಡೂ ಮೊಬೈಲ್ಗಳಿಗೆ ಪಾಸ್ವರ್ಡ್ ಇರುವುದರಿಂದ ಕೋರ್ಟ್ ಅನುಮತಿ ಪಡೆದು ಎಫ್ಎಸ್ಎಲ್ಗೆ ಕಳುಹಿಸುವ ಅಗತ್ಯವಿದೆ. ಸದ್ಯ ಸೈಬರ್ ಸೆಲ್ ಮೂಲಕ ಮೊಬೈಲ್ ಡೇಟಾ ರಿಕವರಿ ಪ್ರಕ್ರಿಯೆ ಆರಂಭಿಸಲಾಗಿದೆ.
ಇನ್ನೂ ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಪತ್ತೆಯಾದ ಸಿಜೆ ರಾಯ್ ಅವರ ಡೈರಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್ಗಳು ಹಾಗೂ ರಾಜಕಾರಣಿಗಳ ಹೆಸರುಗಳು ದಾಖಲಾಗಿರುವುದು ಪತ್ತೆಯಾಗಿದೆ. ಈ ಹೆಸರುಗಳು ಕೇವಲ ಈವೆಂಟ್ ಅಥವಾ ವೃತ್ತಿಪರ ವಿಚಾರಕ್ಕೆ ಸಂಬಂಧಿಸಿದ್ದೇ? ಅಥವಾ ಬೇರೆ ಹಿನ್ನೆಲೆ ಇದೆಯೇ? ಎಂಬುದರ ಬಗ್ಗೆ ಪೊಲೀಸರು ಇಂಚಿಂಚೂ ಪರಿಶೀಲನೆ ನಡೆಸುತ್ತಿದ್ದಾರೆ.



