ಚಿಕ್ಕಾಬಳ್ಳಾಪುರ;- ಸಚಿವ ಎಂ.ಸಿ.ಸುಧಾಕರ್ ಅವರು, ನಂದಿ ಗಿರಿಧಾಮ ರೋಪ್‌ವೇ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ವಿಶ್ವ ವಿಖ್ಯಾತ ಪ್ರವಾಸಿತಾಣ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಮೂರು ಕಿ.ಮೀ ಉದ್ಧದ ರೋಪ್ ವೇ ಅಳವಡಿಸಲು ಅಗತ್ಯವಿರುವ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು.
ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ನಂದಿ ಗಿರಿಧಾಮದಲ್ಲಿರುವ ಎಲ್ಲಾ ಆಸ್ತಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.
ರೋಪ್ ವೇ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ 9 ಎಕರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಸೇರಿದ 7 ಎಕರೆ ಜಮೀನನ್ನು ಹಸ್ತಾಂತರ ಮಾಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.18 ತಿಂಗಳ ಅವಧಿಯಲ್ಲಿ ರೋಪ್ ವೇ ನಿರ್ಮಾಣವಾಗಲಿದೆ ಎಂದರು.
ಬಂಡವಾಳ ಹೂಡುವ ರೋಪ್ ವೇ ನಿರ್ಮಾಣ ಸಂಸ್ಥೆಗೇ 30 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಮೂರು ಕಿ.ಮೀ ಉದ್ದದ ರೋಪ್ ವೇ ನಲ್ಲಿ 50 ಕೇಬಲ್ ಕಾರ್ ಗಳು ಹೋಗುವ ಮತ್ತು 50 ಕೇಬಲ್ ಕಾರ್ ಗಳು ಬರುವ ವ್ಯವಸ್ಥೆಯಿದ್ದು, ಪ್ರತಿ ಕಾರ್ ನಲ್ಲಿ ಆರು ಜನರು ಕುಳಿತುಕೊಳ್ಳಲು ಅವಕಾಶವಿರುತ್ತದೆ ಎಂದರು.