ನಾಗರಹಾವು-ಶ್ವಾನಪಡೆ ಮಧ್ಯೆ ಕಾಳಗ; ವಿಡಿಯೋ ವೈರಲ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸುತ್ತಲೂ ಕಾರ್ಗತ್ತಲು ಕವಿದ ಮಧ್ಯರಾತ್ರಿ. ಜನರೆಲ್ಲರೂ ಸವಿನಿದ್ದೆಯಲ್ಲಿ ಮೈಮರೆತಿದ್ದ ಸಮಯ. ಇದೇ ಸಮಯದಲ್ಲಿ ಅಲ್ಲೊಂದು ಕಾಳಗವೇ ನಡೆದಿತ್ತು. ಒಬ್ಬರೂ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ಅಂದಹಾಗೆ, ಇಲ್ಲಿ ಕಾಳಗ ನಡೆದಿದ್ದು ಶ್ವಾನಪಡೆ ಹಾಗೂ ಒಬ್ಬೊಂಟಿ ನಾಗರಹಾವಿನ ನಡುವೆ. ಇಂಥದೊಂದು ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದಿದ್ದು, ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್ ಮುಖಂಡ ಸಂಗಮೇಶ್ ಕೊಳ್ಳಿಯವರ್ ಅವರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಮಧ್ಯರಾತ್ರಿ ನಾಗರಹಾವೊಂದು ಗೋಡೆಯ ಪಕ್ಕದಲ್ಲಿ ಸುಳಿದಾಡುತ್ತಿತ್ತು. ಕಾಂಪೌಂಡ್ನೊಳಗಿದ್ದ ನಾಯಿಗಳ ಗುಂಪು ಈ ನಾಗರ ಹಾವನ್ನು ಕಂಡು ಜೋರಾಗಿ ಬೊಗಳಲು ಶುರು ಮಾಡಿದವು.

ಅದಾಗಲೇ ಹೊರಹೋಗಲು ತಿಳಿಯದೇ ಕಂಗಾಲಾಗಿದ್ದ ನಾಗರ ಹಾವು ಈ ನಾಯಿಗಳ ಗುಂಪನ್ನೂ ಕಂಡು ಮತ್ತಷ್ಟು ದಿಗಿಲುಗೊಂಡು ಹೆಡೆಯೆತ್ತಿ ಪ್ರತಿರೋಧವೊಡ್ಡೊದಕ್ಕೆ ಮುಂದಾಗಿತ್ತು. ಅರ್ಧ ಗಂಟೆಗೂ ಹೆಚ್ಚು ಕಾಲ ಶ್ವಾನಗಳ ಗುಂಪು ಹಾವನ್ನ ತಡೆದು ನಿಲ್ಲಿಸಿದವು. ಎಲ್ಲ ಕಡೆಯಿಂದ ಸುತ್ತುವರೆದ ಶ್ವಾನಗಳಿಂದಾಗಿ ಹಾವು ಆಚೀಚೆ ಹೋಗಲೂ ಅಸಾಧ್ಯವಾಗಿ ಅಲ್ಲಿಯೇ ಇರುವಂತಾಯಿತು.

ನಾಯಿಗಳ ಗಲಾಟೆಯಿಂದ ಎಚ್ಚೆತ್ತು ಅಕ್ಕಪಕ್ಕದವರು ಎದ್ದುಬಂದು ಗಮನಿಸಿ, ವಿಷಯವನ್ನು ಉರಗಪ್ರಿಯ ಬುಡ್ನೆ ಸಾಬ್ರಿಗೆ ತಿಳಿಸಿದಾಗ, ಸ್ಥಳಕ್ಕೆ ಬಂದ ಬುಡ್ನೆಸಾಬ್, ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ. ಶ್ವಾನಗಳಿಂದಲೇ ಉರಗದ ಜೀವ ಉಳಿದಂತಾಗಿದೆ. ಇಲ್ಲವಾದಲ್ಲಿ ಹಾವು ಆಚೆ ಹೋಗಿ ಜನರ ಕಣ್ಣಿಗೆ ಬಿದ್ದಿದ್ದರೆ ಜನರೇ ಹೊಡೆದು ಸಾಯಿಸುವ ಸಾಧ್ಯತೆಯಿತ್ತು ಎಂದು ಬುಡ್ನೆ ಸಾಬ್ ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here