ವಿಜಯಸಾಕ್ಷಿ ಸುದ್ದಿ, ನರಗುಂದ : ನರೇಗಾ ಯೋಜನೆಯಡಿ ಕೈಗೊಂಡ ಸಾಮೂಹಿಕ ಕಾಮಗಾರಿಗಳಲ್ಲಿ ಮಹಿಳಾ ಕೂಲಿಕಾರರು ಪುರುಷ ಕೂಲಿಕಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ನರಗುಂದ ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಮಾಡಿರದ ಸಾಧನೆಯನ್ನು ಈ ವರ್ಷದ ಆರ್ಥಿಕ ವರ್ಷದಲ್ಲಿ ನರಗುಂದ ತಾಲೂಕು ಪಂಚಾಯತ ಮಾಡಿದೆ. ಈ ಮೂಲಕ ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.
2024-25ನೇ ಸಾಲಿನಲ್ಲಿ ತಾಲೂಕಿನ 13 ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಒಟ್ಟು 2,29,798 ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಗುರಿಗೆ ಅನುಗುಣವಾಗಿ ಸದ್ಯ ಒಟ್ಟು 1,85,496 ಮಾನವ ದಿನಗಳ ಕೆಲಸಗಳನ್ನು ಮಾಡಲಾಗಿದೆ. ಈ ಪೈಕಿ 93,420 ಮಾನವ ದಿನಗಳಲ್ಲಿ ಮಹಿಳಾ ಕೂಲಿಕಾರರು ಕೆಲಸ ಮಾಡಿದ್ದಾರೆ. ಹೀಗಾಗಿ ತಾಲೂಕಿನ ನರೇಗಾ ಕೆಲಸದಲ್ಲಿ ಕೂಲಿಕಾರರ ಭಾಗವಹಿಸುವಿಕೆಯಲ್ಲಿ ಶೇ.50.36ರಷ್ಟು ಮಹಿಳೆಯರಿದ್ದಾರೆ.
ನರೇಗಾ ಕಾಮಗಾರಿ ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ 2020-21ನೇ ಸಾಲಿನಲ್ಲಿ ಶೇ. 41.48ರಷ್ಟಿದ್ದರೆ, 2021-22ನೇ ಸಾಲಿನಲ್ಲಿ 41.39ರಷ್ಟಿತ್ತು. 2022-23ನೇ ಸಾಲಿನಲ್ಲಿ 45.47ರಷ್ಟಿದ್ದರೆ 2023-24ರಲ್ಲಿ 48.77ರಷ್ಟಿತ್ತು. ಸದ್ಯ 2024-25ರ ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆಯುವುದರೊಳಗೆ ತಾಲೂಕಿನ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ.50.36ರಷ್ಟಾಗಿದೆ.
ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ನರೇಗಾ ಕಾಮಗಾರಿಯಲ್ಲಿ ಪುರುಷರಿಗೆ ಸರಿಸಮಾನವಾಗಿ 349 ರೂ ಕೂಲಿ ಮೊತ್ತವನ್ನು ಕೊಡಲಾಗುತ್ತಿದೆ. ನರೇಗಾ ಕಾಮಗಾರಿಯಲ್ಲಿ ಮಹಿಳಾ ಕೂಲಿಕಾರರು ಯಾವುದೇ ಮುಜುಗರಕ್ಕೆ ಒಳಗಾಗದೇ ಕೆಲಸ ನಿರ್ವಹಣೆ ಮಾಡಬಹುದು ಎಂಬುದನ್ನು ಮಹಿಳಾ ಕೂಲಿಕಾರರಿಗೆ ಮನದಟ್ಟು ಮಾಡಿಕೊಡಲಾಯಿತು. ಪ್ರತಿಯೊಂದು ಗ್ರಾ.ಪಂಗಳಲ್ಲಿ ಮಹಿಳಾ ಒಕ್ಕೂಟದ ಸಂಘಟನೆಗಳ ಸದಸ್ಯರನ್ನು ಸಂಪರ್ಕಿಸಿ ನರೇಗಾ ಕೆಲಸಗಳಲ್ಲಿ ಮಹಿಳೆಯರನ್ನು ತೊಡಗಿಸುವಂತೆ ಪ್ರೇರಣೆ ನೀಡಲಾಯಿತು. ಯೋಜನೆಯಡಿ ಮಹಿಳೆಯರು ಕೆಲಸ ಕೈಗೊಂಡರೆ ಮಹಿಳಾ ಕೂಲಿಕಾರರ ವೈಯಕ್ತಿಕ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಗ್ರಾ.ಪಂಗಳ ವ್ಯಾಪ್ತಿಗಳಲ್ಲಿ ಯುವಕ ಮಂಡಲಗಳ ಸಭೆ, ಕೂಲಿಕಾರರ ಸಭೆ, ಮಹಿಳಾ ಸ್ತ್ರೀಶಕ್ತಿ ಸಭೆ ಕೈಗೊಂಡು ನರೇಗಾ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಸೂಕ್ತ ಕೆಲಸ ನಿರ್ವಹಣೆಗೆ ಕ್ರಮವಹಿಸಿದ್ದರಿಂದಾಗಿ ನರೇಗಾ ಕೆಲಸದಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸಲು ಕಾರಣವಾಗಿದೆ.
ಈ ವರ್ಷ ಶೇ.60ರಷ್ಟು ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಗುರಿ ಹೊಂದಲಾಗಿದೆ. ಸದ್ಯ ಶೇ.50.36ರಷ್ಟು ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ 9 ತಿಂಗಳು ಬಾಕಿಯಿದೆ. ಮುಂಬರುವ ಯೋಜನೆಯ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ತಾಲೂಕಿನ ಗುರಿ ಸಾಧನೆಗೆ ಕ್ರಮವಹಿಸಲಾಗುವುದು. ತಾಲೂಕಿನ ಎಲ್ಲ ನರೇಗಾ ಸಿಬ್ಬಂದಿ ಹಾಗೂ ಆರ್.ಡಿ.ಪಿ.ಆರ್ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ನರಗುಂದ ತಾಲೂಕಿನಲ್ಲಿ ಈ ಪ್ರಗತಿ ಸಾಧ್ಯವಾಗಿದೆ.
– ಎಸ್.ಕೆ.ಇನಾಮದಾರ.
ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ-ನರಗುಂದ.ಮಹಿಳಾ ಕೂಲಿಕಾರರಿಗೆಂದೇ ಪ್ರತ್ಯೇಕವಾಗಿ ಸಮುದಾಯ ಕಾಮಗಾರಿ ಆರಂಭಿಸಿ ಕೆಲಸ ನೀಡಲಾಯಿತು. ಯೋಜನೆಯಡಿ ಕಾಯಕಬಂಧುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಯಿತು. ಕಾಯಕ ಬಂಧುಗಳಿಗೆ ಸೂಕ್ತ ತರಬೇತಿ ನೀಡಿ ಯೋಜನೆಯಡಿ ಮಹಿಳಾ ಕೂಲಿಕಾರರನ್ನು ಸಂಘಟಿಸಿ ನರೇಗಾ ಕೆಲಸದಲ್ಲಿ ಮಹಿಳೆಯರನ್ನು ತೊಡಗಿಸಿಕೊಂಡಿದ್ದು ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಳಕ್ಕೆ ಸಹಾಯಕವಾಯಿತು.
– ಸಂತೋಷಕುಮಾರ್ ಪಾಟೀಲ್.
ಸಹಾಯಕ ನಿರ್ದೇಶಕರು,
ಗ್ರಾಮೀಣ ಉದ್ಯೋಗ, ತಾ.ಪಂ ನರಗುಂದ.ಈ ವರ್ಷ ಬರಗಾಲದಿಂದಾಗಿ ದುಡಿಯೋಕೆ ಕೆಲಸ ಇಲ್ಲ ಎಂಬ ಚಿಂತೆ ಇತ್ತು. ಆದರೆ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಿದರು. ಒಡ್ಡಿನ (ಬದು ನಿರ್ಮಣ) ಕೆಲಸಕ್ಕೆ ಹೋಗಿದ್ದರಿಂದ ನನ್ನ ಖಾತೆಗೆ ಹಣ ಜಮಾವಣೆ ಆಯಿತು. ಬಂದ ಹಣದಲ್ಲಿ ಮಕ್ಕಳ ಶಾಲೆ ಖರ್ಚು, ಮನೆಯ ಖರ್ಚಿಗೆ ಸಹಾಯಕವಾಯಿತು.
– ಮಂಜುಳಾ ಗೊಬ್ಬರಗುಂಪಿ.
ಮಹಿಳಾ ಕೂಲಿಕಾರರು, ಬೆನಕನಕೊಪ್ಪ ಗ್ರಾ.ಪಂ.