ಕೇರಳ: ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾರಾಯಣ ಗುರುಗಳು ಕೇವಲ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು ಎಂದರು.
ಇದೇ ನಾರಾಯಣ ಗುರುಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂಥಾ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ ಎಂದರು. ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಮೆಚ್ಚುಗೆ ಸೂಚಿಸಿದರು.
ರಾಜಕಾರಣ ನೈತಿಕತೆಯಿಂದ ದೂರವಾಗುತ್ತಾ, ಧರ್ಮವು ನೈತಿಕತೆಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಆಯುಧವಾಗುತ್ತಿರುವ ಅಪಾಯದ ದಿನಗಳಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು.ಶಿವಗಿರಿ ಮಠ ‘ಜೀವಂತ ಸಂವಿಧಾನ’ದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ ‘ಕೋಮು-ವಿರೋಧಿ’ ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ ‘ಸಂವಾದ’ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ ‘ಸಮಾನತೆ’ಯನ್ನು ಮತ್ತು ಸಾಂಕೇತಿಕತೆಗಿಂತ ‘ನೈತಿಕತೆ’ಯನ್ನು ಎತ್ತಿ ಹಿಡಿಯುತ್ತದೆ ಎಂದರು.
“ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ” ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು.
ನಾರಾಯಣ ಗುರುಗಳು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅವರು ಅನ್ಯಾಯದ ಬೇರುಗಳನ್ನೇ ಕಿತ್ತೆಸೆದರು. ಕೇರಳವು ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತು ಅಸಮಾನತೆಯಿಂದ ಉಸಿರುಗಟ್ಟುತ್ತಿದ್ದಾಗ, “ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಸತ್ಯವನ್ನು ಘೋಷಿಸಿದರು.



