ನರೇಗಾ ಯೋಜನೆಯಡಿ ಸ್ವಾವಲಂಬಿಗಳಾಗಿ : ಎಸ್.ಕೆ. ಇನಾಮದಾರ

0
Narega Personal Work Distribution Campaign
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ಗ್ರಾಮೀಣ ಪ್ರದೇಶದ ಕೂಲಿಕಾರರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಆರ್ಥಿಕ ನೆರವು ಪಡೆದು ಜೀವನ ರೂಪಿಸಿಕೊಳ್ಳಬೇಕು. ಕೂಲಿಕಾರರ ಜೀವನ ಮಟ್ಟ ಸುಧಾರಿಸುವ ಕಾಮಗಾರಿಗಳು ಯೋಜನೆಯಡಿ ಲಭ್ಯವಿದ್ದು, ಗ್ರಾಮ ಪಂಚಾಯತ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಕೆ. ಇನಾಮದಾರ ಹೇಳಿದರು.

Advertisement

ಕೊಣ್ಣೂರು ಗ್ರಾ.ಪಂ ಕಚೇರಿ ಆವರಣದಲ್ಲಿ ಜರುಗಿದ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳ ವಿತರಣಾ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳವರೆಗೆ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಉದ್ಯೋಗ ಚೀಟಿ ಪಡೆದ ಕುಟುಂಬ ವರ್ಗ ವರ್ಷಕ್ಕೆ 100 ದಿನ ಕೆಲಸ ಮಾಡಿದರೆ ವಾರ್ಷಿಕವಾಗಿ ಯೋಜನೆಯಡಿ 34800 ರೂ, ಪಡೆಯುತ್ತಾರೆ. ಯೋಜನೆಯಡಿ ಅರ್ಹ ಫಲಾನುಭವಿಗಳು ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯಡಿ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದರು.

ಗಂಡು ಮತ್ತು ಹೆಣ್ಣು ಕೂಲಿಕಾರರಿಗೆ ಸಮಾನವಾಗಿ 349 ರೂಪಾಯಿ ದಿನವೊಂದಕ್ಕೆ ಯೋಜನೆಯಡಿ ಕೂಲಿ ಮೊತ್ತ ನೀಡಲಾಗುತ್ತದೆ. ಕೂಲಿಕಾರರ ಕೇಂದ್ರಬಿಂದುವಾಗಿರುವ ನರೇಗಾ ಯೋಜನೆಯು ಗ್ರಾಮೀಣ ಕೂಲಿಕಾರರಿಗೆ ಕೈತುಂಬ ಉದ್ಯೋಗ ನೀಡುವ ಕಾರ್ಯವನ್ನು ಮಾಡುತ್ತಿದೆ. ಮಹಿಳೆಯರು ಮತ್ತು ವಿಶೇಷಚೇತನರಿಗೆ ಯೋಜನೆಯಡಿ ಕೆಲಸದಲ್ಲಿ ವಿಶೇಷ ರಿಯಾಯತಿ ಇದೆ. ಕೂಲಿಕಾರರಿಗೆ ಇರುವ ಸೌಲಭ್ಯಗಳನ್ನು ಯೋಜನೆಯಡಿ ಪಡೆದುಕೊಂಡು ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸದ ಸಲುವಾಗಿ ಬೇರೆ ಸ್ಥಳಕ್ಕೆ ಹೋಗದೇ ಇದ್ದೂರಲ್ಲೇ ನರೇಗಾದಲ್ಲಿ ಕೆಲಸ ಮಾಡಿ ಎಂದು ತಿಳಿಸಿದರು.

ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳಕ್ಕೆ ಕೊಣ್ಣೂರು ಗ್ರಾ.ಪಂ ಅಧ್ಯಕ್ಷೆ ಸಿದ್ದವ್ವ ಕಳಸಣ್ಣವರ ಹಾಗೂ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಮಮತಾಜ್ ಬೇಗಂ ಕುರ್ಲಗೇರಿ, ಹುಸೇನಬೀ ಬುರುಡಿ, ಜ್ಯೋತಿ ವಾಸನ, ಹನಮಂತಪ್ಪ ಚಿನ್ನಾರ್, ಕೆ.ಟಿ. ಚವ್ಹಾಣ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

ಕೊಣ್ಣೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಮಾತನಾಡಿ, ವೈಯಕ್ತಿಕ ವಿತರಣಾ ಮೇಳ ಅಭಿಯಾನದ ಮೂಲಕ ಹೊಸ ಉದ್ಯೋಗ ಚೀಟಿ ಪಡೆದ ಕುಟುಂಬಗಳಿಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದೇವೆ. ಯೋಜನೆಯಡಿ ಇರುವ ವಿವಿಧ ಕಾಮಗಾರಿಗಳನ್ನು ಪಡೆದುಕೊಳ್ಳಲು ಇಚ್ಛಿಸುವ ಕೂಲಿಕಾರರು ಗ್ರಾ.ಪಂ ಕಚೇರಿಗೆ ಬಂದು ಬೇಡಿಕೆ ಸಲ್ಲಿಸಬಹುದು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here