ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪಟ್ಟಣದ ಮಜಿರೆ ಗ್ರಾಮವಾದ ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಮಠದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಶ್ರೀ ವೀರಪ್ಪಜ್ಜನ ಭಕ್ತರೆಲ್ಲರೂ ಸೇರಿ ಈ ಸಾರೆ ಅಜ್ಜನ ಜಾತ್ರಾ ಮಹೋತ್ಸವವನ್ನು ಪುಣ್ಯಾರಾಧನೆಯ ಶತಮಾನೋತ್ಸವವನ್ನಾಗಿ ಆಚರಿಸುತ್ತಿದ್ದಾರೆ. ಶತಮಾನೋತ್ಸವದ ಕಾರ್ಯಗಳು ಕಳೆದ ಜ. 30ರಿಂದ ಪುರಾಣದೊಂದಿಗೆ ಪ್ರಾರಂಭಗೊಂಡಿದ್ದು, ನಾಳೆಗೆ ಪುರಾಣ ಪ್ರವಚನದ ಮಹಾ ಮಂಗಲ ಜರುಗಿ, ಸಂಜೆಗೆ ಮಹಾರಥೋತ್ಸವವು ನಡೆಯಲಿದೆ. ಈ ಮಹಾರಥೋತ್ಸವಕ್ಕೆ ನರೇಗಲ್ಲ-ಕೋಡಿಕೊಪ್ಪ ಸಂಪೂರ್ಣವಾಗಿ ಸಜ್ಜಾಗಿವೆ.
9 ದಿನಗಳ ಪರ್ಯಂತ ನಡೆಯುವ ಈ ಜಾತ್ರೆಗೆ ಭಕ್ತರು ನಾ ಮುಂದು ತಾ ಮುಂದು ಎಂದು ದೇಣಿಗೆಯನ್ನು ನೀಡುವುದರ ಜೊತೆಗೆ ರೊಟ್ಟಿ ಬುತ್ತಿಯನ್ನು ಮೆರವಣಿಗೆಯ ಮೂಲಕ ತಂದು ಅರ್ಪಿಸುವುದು ಇಂದಿಗೂ ನಡೆದಿರುವುದು ಶ್ರೀ ವೀರಪ್ಪಜ್ಜನವರ ಲೀಲೆಗೆ ಸಾಕ್ಷಿಯಾಗಿದೆ. ಬೂಂದೆ, ಬಾದಾಮ ಪುರಿ, ಉದುರು ಸಜ್ಜಕ, ಶೇಂಗಾ ಹೋಳಿಗೆ, ಹೂರಣದ ಹೋಳಿಗೆ, ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಘಮಘಮಿಸುವ ಸಾರು ಪ್ರಸಾದದ ರೂಪದಲ್ಲಿ ಭಕ್ತರ ಹೊಟ್ಟೆ ಸೇರುತ್ತಿದ್ದು, ಭಕ್ತರು ಏನು ತಿನ್ನಲಿ ಏನು ಬಿಡಲಿ ಎಂದು ಯೋಚಿಸುವಷ್ಟು ವಿವಿಧ ಬಗೆಯ ಖಾದ್ಯಗಳು ದೊರೆಯುತ್ತಿವೆ.
ನರೇಗಲ್ಲ ಪಟ್ಟಣ ಮತ್ತು ಕೋಡಿಕೊಪ್ಪ ಗ್ರಾಮಗಳಂತೂ ನೂತನ ಮದುವಣಗಿತ್ತಿಯಂತೆ ಶೃಂಗಾರಗೊಂಡಿವೆ. ಊರ ತುಂಬಾ ಹಾಕಿರುವ ಹೋರ್ಡಿಂಗ್ಸ ಗಳು, ಬಂಟಿಂಗ್ಸ್ ಗಳು, ಬ್ಯಾನರ್ಗಳು ನೋಡುಗರ ಕಣ್ಮನಗಳನ್ನು ಸೆಳೆಯುತ್ತಿವೆ. ಅಬ್ಬಿಗೇರಿ ರಸ್ತೆಯ ಕಡೆಯಿಂದ ಶ್ರೀ ವೀರಪ್ಪಜ್ಜನವರ ಮಠಕ್ಕೆ ಹೋಗುವ ರಸ್ತೆಗೆ ನಿರ್ಮಿಸಿರುವ ಸ್ವಾಗತ ಕಮಾನು ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಜಾತ್ರೆಗೆ ಬರುವವರೆಲ್ಲರೂ ಒಂದು ಕ್ಷಣ ಅಲ್ಲಿ ನಿಂತು ಅದನ್ನು ಕಣ್ತುಂಬಿಕೊಂಡೇ ಹೋಗುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ.
ಶುಕ್ರವಾರ ಮಧ್ಯಾಹ್ನ ಸಿದ್ನೇಕೊಪ್ಪ ಗ್ರಾಮದ ಸದ್ಭಕ್ತರು ತೇರಿನ ಹಗ್ಗವನ್ನು ಮೆರವಣಿಗೆಯಲ್ಲಿ ಶ್ರೀಮಠಕ್ಕೆ ತೆಗೆದುಕೊಂಡು ಬರುತ್ತಾರೆ. ಪಟ್ಟಣದ ದಿ. ಬಂದನಗೌಡ ಸಂಕನಗೌಡ್ರ ಇವರ ಮನೆಯಿಂದ ಕಳಸದ ಮೆರವಣಿಗೆಯು ಹೊರಡಲಿದ್ದು, ಅದು ಮಠವನ್ನು ತಲುಪಿದ ನಂತರ ಸಂಜೆ 5ಕ್ಕೆ ಶ್ರೀ ವೀರಪ್ಪಜ್ಜನವರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಜಯಘೋಷಗಳ ಮಧ್ಯೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಜ. 8ರಂದು ಸಂಜೆ ನಡೆಯುವ ಲಘು ರಥೋತ್ಸವದೊಂದಿಗೆ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವ ಮತ್ತು ಮಹಾರಥೋತ್ಸವಕ್ಕೆ ತೆರೆ ಬೀಳಲಿದೆ.
ಚಿಣ್ಣರ ಮನ ತಣಿಸಲು, ದೊಡ್ಡವರನ್ನು ಚಿಕ್ಕವರನ್ನಾಗಿಸಿ ಮನರಂಜನೆ ನೀಡಲು ಬ್ರೇಕ್ ಡ್ಯಾನ್ಸ್ ಮತ್ತು ಕೋಲಂಬಸ್ಗಳ ಆಗಮನವೂ ಆಗಿದೆ. ಇದು ಗ್ರಾಮೀಣ ಭಾಗವಾಗಿರುವದರಿಂದ ಇಲ್ಲಿ ಪ್ರವೇಶಕ್ಕೆ ಹೆಚ್ಚಿನ ದುಡ್ಡನ್ನು ಇಡದೆ ಕೈಗೆಟಕುವ ದರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಂಯೋಜಕ ಮಂಜುನಾಥ ಹೇಳಿದರು.