ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕಳೆದ ಆರೇಳು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ನರೇಗಲ್ಲ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯು ಸೆ. 2ರಂದು ನಡೆದು ಬಿಜೆಪಿಯ ವಿರೋಧಿ ಬಣದ ಫಕೀರಪ್ಪ ಮಳ್ಳಿ ಅಧ್ಯಕ್ಷರಾಗಿ ಮತ್ತು ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಕಳೆದ ಆರು ದಿನಗಳಿಂದ ಕಾಣೆಯಾಗಿದ್ದ ಬಿಜೆಪಿಯ 6 ಸದಸ್ಯರು ಕಾಂಗ್ರೆಸ್‌ನ ಬೆಂಬಲಿಗರೊಂದಿಗೆ ಇಂದು ಚುನಾವಣಾ ಸಮಯಕ್ಕೆ ಪ್ರತ್ಯಕ್ಷರಾದರು. ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಯಿತು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ವಿರೋಧಿ ಬಣದ ಫಕೀರಪ್ಪ ಮಳ್ಳಿ ಮತ್ತು ಬಿಜೆಪಿಯ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ವಿರೋಧಿ ಬಣದ ಕುಮಾರಸ್ವಾಮಿ ಕೋರಧಾನ್ಯಮಠ ಹಾಗೂ ಬಿಜೆಪಿಯ ವಿಶಾಲಾಕ್ಷಿ ಹೊಸಮನಿ ನಾಮಪತ್ರ ಸಲ್ಲಿಸಿದರು.
ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು ಮಧ್ಯಾಹ್ನ 2.15ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಿದ್ದರು. ಆದರೆ ಯಾರೂ ನಾಮಪತ್ರಗಳನ್ನು ಹಿಂಪಡೆಯದೆ ಇದ್ದುದರಿಂದ 2.15ಕ್ಕೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಬಿಜೆಪಿ ವಿರೋಧಿ ಬಣದ 6 ಸದಸ್ಯರು, ವಿರೋಧಿ ಬಣವನ್ನು ಬೆಂಬಲಿಸಿದ 3 ಜನ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಓರ್ವ ಪಕ್ಷೇತರ ಸದಸ್ಯ ಮತ್ತು ಶಾಸಕರ ಮತ ಒಟ್ಟು 11 ಮತಗಳು ವಿರೋಧಿ ಬಣದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, 14ನೇ ವಾರ್ಡ್‌ನ ಸದಸ್ಯ ಫಕೀರಪ್ಪ ಮಳ್ಳಿಯವರ ಪರವಾಗಿ ಚಲಾವಣೆಯಾದವು.
ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ 17ನೇ ವಾರ್ಡ್‌ನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಅವರಿಗೆ 11 ಮತಗಳು ಚಲಾವಣೆಯಾದವು. ಬಿಜೆಪಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ 4ನೇ ವಾರ್ಡ್‌ನ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಅವರಿಗೆ 7 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಬಿಜೆಪಿಯ 8ನೇ ವಾರ್ಡ್‌ನ ವಿಶಾಲಾಕ್ಷಿ ಹೊಸಮನಿ ಅವರಿಗೆ 7 ಮತಗಳು ಬಂದವು. ಆಗ ಚುನಾವಣಾಧಿಕಾರಿ, ಅಧ್ಯಕ್ಷರಾಗಿ ಫಕೀರಪ್ಪ ಮಳ್ಳಿ ಹಾಗೂ ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಕೋರಧಾನ್ಯಮಠರ ಆಯ್ಕೆಯನ್ನು ಘೋಷಿಸಿದರು.
ಆಯ್ಕೆಯ ತರುವಾಯ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಬಿಜೆಪಿಯ ದುರಾಡಳಿತ ಮತ್ತು ಅಲ್ಲಿನ ಮುಖಂಡರ ವರ್ತನೆಗೆ ಬೇಸತ್ತು 6 ಸದಸ್ಯರು ಬಿಜೆಪಿಯಿಂದ ನಮಗೆ ಬೆಂಬಲ ಕೊಡಿ ಎಂದು ಕೇಳಿದರು.
ಅದಕ್ಕಾಗಿ ನಾವು ಪಕ್ಷೇತರ ಸದಸ್ಯರೂ ಸೇರಿದಂತೆ ನಾಲ್ಕು ಜನರು ಮತ್ತು ನಾನು ಬಿಜೆಪಿ ವಿರೋಧಿ ಬಣದ ಸದಸ್ಯರಿಗೆ ಬೆಂಬಲ ನೀಡಿದೆವು. ಈಗ ಅದೇ ವಿರೋಧಿ ಬಣದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ನರೇಗಲ್ಲ ಪಟ್ಟಣ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಎಂದು ಹೇಳಿದರು.
ಬಿಜೆಪಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ಪಕ್ಷದಿಂದ ಅಧ್ಯಕ್ಷ/ಉಪಾಧ್ಯಕ್ಷರಾಗುವಲ್ಲಿ ನನ್ನ ಪಾತ್ರ ಮಹತ್ವದ್ದಿದೆ. ಅದನ್ನು ಮರೆತು ಅಧಿಕಾರದ ಆಸೆಯಿಂದ ಇವರು ಪಕ್ಷಕ್ಕೆ ದ್ರೋಹ ಮಾಡಿ ಹೊರಕ್ಕೆ ಹೋಗಿದ್ದಾರೆ. ಅವರೂ ಆಡಳಿತ ಮಾಡಿ ತೋರಿಸಲಿ ಎಂದರು.
ಸಂಭ್ರಮಾಚರಣೆ
ಬಿಜೆಪಿಯ ವಿರೋಧಿ ಬಣ ತಮ್ಮ ಬೆಂಬಲ ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು. ರೋಣ ಸಿಪಿಐ ಎಸ್.ಎಸ್. ಬೀಳಗಿ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಮತ್ತಿತರ ಪೊಲೀಸ್ ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.