ಕರೂರು:- ತಮಿಳುನಾಡಿನಲ್ಲಿ ಶನಿವಾರ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 31 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಸಂಬಂಧ X ಮಾಡಿರುವ ಪ್ರಧಾನಿ ಮೋದಿ, “ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯ ಸಂದರ್ಭದಲ್ಲಿ ನಡೆದ ದುರದೃಷ್ಟಕರ ಘಟನೆ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ದೇವರು ಶಕ್ತಿ ತುಂಬಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ ಆಯೋಜಿಸಿದ್ದ ಪ್ರಚಾರದ ರ್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 31 ಅಮಾಯಕ ಜನರು ಮೃತಪಟ್ಟಿದ್ದಾರೆ. ಇನ್ನೂ 60ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೊಂದರೆ ಅನುಭವಿಸಿದ ಜನರು ಮೂರ್ಛೆ ತಪ್ಪಿ ಬಿದ್ದರು. ಅಲ್ಲದೆ, ಶನಿವಾರ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ಅದೇವೇಳೆ ನೂಕುನುಗ್ಗಲಾಗಿದ್ದರಿಂದ ಮೂರ್ಛೆ ತಪ್ಪಿ ಬಿದ್ದರು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.



