ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿಗಳು ಗದಗ, ತಾಲೂಕು ಪಂಚಾಯಿತಿ, ಪುರಸಭೆ ಮುಂಡರಗಿ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಡೆಂಗೀ ದಿನಾಚಾರಣೆ ಅಂಗವಾಗಿ ಪುರಸಭೆ ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಮುಂಡರಗಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎಸ್. ಸಜ್ಜನರ ಮಾತನಾಡಿ, ಡೆಂಗೀ, ಚಿಕುನ್‌ಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ಸ್ವಚ್ಚವಾದ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು, ತನ್ನ ವಂಶಾಭಿವೃದ್ಧಿಯನ್ನು ಮಾಡುತ್ತವೆ. ವಿತರೀತ ಜ್ವರ, ಮೈ-ಕೈ ನೋವು, ತಲೆನೋವು ಹಾಗೂ ಕಣ್ಣು ಕೆಂಪಾಗುವಿಕೆ ಈ ರೋಗದ ಲಕ್ಷಣಗಳು. ಈ ರೋಗವು ಹರಡದಂತೆ ಮನೆಯಲ್ಲಿ ಶೇಖರಿಸುವ ನೀರಿನ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ನೀರನ್ನು ಶೇಖರಿಸಿ ಮೇಲೆ ಮುಚ್ಚಬೇಕು. ಮನೆಯ ಸುತ್ತ-ಮುತ್ತ ಪರಿಸರವನ್ನು ಸ್ಚಚ್ಛವಾಗಿಟ್ಟುಕೊಳ್ಳಬೇಕು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಮುಂಡರಗಿ ಮಾತನಾಡಿ, ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ ಈ ರೋಗದ ಬಗ್ಗೆ ಜನರಿಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಡೆಂಗೀ ರೋಗದ ಬಗ್ಗೆ ಪೌರ ಕಾರ್ಮಿಕರು ಸಮುದಾಯದವರಿಗೆ ತಿಳುವಳಿಕೆಯನ್ನು ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರಫಿಕ್ ಮುಲ್ಲಾನವರ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ವಹಿಸಿದ್ದರು. ಕಾಳಪ್ಪ ಬಡಿಗೇರ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಮ್.ಎಸ್. ಮ್ಯಾಗೇರಿ ನಿರೂಪಿಸಿ ವಂದಿಸಿದರು.