ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ನಿಮಿತ್ತ ವಿಶ್ವಮಾನವ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ, ಹುಟ್ಟುವ ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ಪ್ರತಿ ಮಗುವು ವಿಶ್ವಮಾನವನೇ. ಆನಂತರ ಮಗುವನ್ನು ಜಾತಿ-ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ, ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಎಂದು ಹೇಳಿದರು.
ಶಿಕ್ಷಕರಾದ ಎಚ್.ಡಿ. ನಿಂಗರೆಡ್ಡಿ, ಆರ್.ಕೆ. ಉಪನಾಳ, ಆರ್.ಎಂ. ಶಿರಹಟ್ಟಿ, ಎಲ್.ಎ. ಬಣಕಾರ, ನೇತ್ರಾವತಿ ಕುಂಬಾರ ಹಾಗೂ ಎನ್‌ಟಿಸಿ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



