ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸನಾತನ ಸಂಸ್ಕೃತಿಯ ಶಬ್ದಗಳಿಗೆ ಭಾವ ತುಂಬಿ ಜಗದಾದ್ಯಂತ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ಪ್ರೇಮವನ್ನು ಬೆಸೆಯುವ, ಆಧ್ಯಾತ್ಮಿಕ ಚಿಂತನಾ ಶಿಖರವನ್ನು ತಲುಪಲು ಬೇಕಾದ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಸನಾತನ ಸಂಸ್ಕೃತಿಯ ಭಾವಗೀತವೇ ಆಗಿದ್ದಾರೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ‘ರಾಷ್ಟ್ರೀಯ ಯುವದಿನ ಸಮಾರಂಭ’ದಲ್ಲಿ ಮಾತನಾಡಿದರು.
ಪ್ರೊ. ರಾಹುಲ್ ಒಡೆಯರ್ ಮಾತನಾಡುತ್ತಾ, ವಿವೇಕಾನಂದರ ಪಾತ್ರ ನಿರ್ಮಾಣದ ಉಲ್ಲೇಖ ಮಾಡಿ, ಕೇವಲ ಉದ್ಯೋಗ ಪಡೆಯುವ ಉದ್ದೇಶದಿಂದ ಅಲ್ಲದೆ, ಸಮಾಜಕ್ಕೆ ಉಪಯುಕ್ತವಾಗುವ ದೃಷ್ಟಿಯಿಂದ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಯುವದಿನದ ಆಚರಣೆಯ ಪೂರ್ವದಲ್ಲಿ ಆಡಳಿತಾಧಿಕಾರಿಗಳಾದ ಎಂ.ಸಿ. ಹಿರೇಮಠ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಭಾವನಮನಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ ಉಪಸ್ಥಿತರಿದ್ದರು.



