ದಾವಣಗೆರೆ:- ರಾಷ್ಟ್ರ ರಾಜಕಾರಣವನ್ನು ಅರಿತು ಶತ್ರುವನ್ನು ಸೋಲಿಸಬೇಕು ಎಂದು ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದಿಸಿದ ವಿಷಯ ಕುರಿತು ಸಚಿವ KN ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರೇ ದ್ವೇಷ ಸಾಧಿಸಿ ಶತ್ರುವನ್ನ ಬಲಿಷ್ಠ ಮಾಡಿದ್ದಾರೆ. ಏನೇ ಇದ್ದರೂ ತಪ್ಪನ್ನೇ ಮುಂದಿಟ್ಟುಕೊಂಡು ಶತ್ರುವನ್ನು ಬಲಿಷ್ಠ ಮಾಡಬಾರದು. ಈಗ ದೆಹಲಿಯಲ್ಲಿ ಆಗಿದೆ, ಹಿಂದೆ ಹರಿಯಾಣದಲ್ಲಿ ಆಗಿತ್ತು. ಇಬ್ಬರಿಗೂ ಜಂಭ ಇದೆ. ಹೀಗಾಗಿ ಸೋಲಾಗಿದೆ. ರಾಷ್ಟ್ರ ರಾಜಕಾರಣವನ್ನು ಅರಿತು ಶತ್ರುವನ್ನು ಸೋಲಿಸಬೇಕು. ಜಾತ್ಯಾತೀತರು ಒಂದಾಗಿ, ಜಾತಿಯನ್ನು ಸೋಲಿಸಬೇಕು ಎಂದು ಕಿಡಿಕಾರಿದರು.
ಮತ ವಿಭಜನೆಯಿಂದ ಬಿಜೆಪಿ ಗೆದ್ದಿದೆ. ಇಲ್ಲಿ ರಾಜಕೀಯ ಜಂಜಾಟವಿದೆ. ನಮ್ಮವರೇ ದ್ವೇಷ ಸಾಧಿಸಿಕೊಂಡು ಶತ್ರುವನ್ನ ಬಲಿಷ್ಟ ಮಾಡಿದ್ದಾರೆ. ಯಾರೇ ಸಿಎಂ ಆದರೂ ಅಂತಿಮ ತೀರ್ಮಾನ ಹೈಕಮಾಂಡ್‌ನದ್ದಾಗಿರುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.