ಪ್ರಕೃತಿ ಮುಂದಿನ ಪೀಳಿಗೆಗೆ ಸೇರಿದ ಆಸ್ತಿ: ಡಿಸಿಎಂ ಡಿ.ಕೆ.ಶಿವಕುಮಾರ್

0
Spread the love

ಬೆಂಗಳೂರು: ಮನುಷ್ಯನ ಉಗಮವಾಗಿದ್ದೇ ಕಾಡಿನಲ್ಲಿ. ಅಂದು ಕಾಡಾಗಿದ್ದು ಇಂದು ನಾಡಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿ ದೊಡ್ಡವರಿಗೆ ಸೇರಿದ್ದಲ್ಲ, ಮಕ್ಕಳಿಗೆ ಅಂದರೆ ಮುಂದಿನ ಪೀಳಿಗೆಗೆ ಸೇರಿದ ಆಸ್ತಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದ ಮುಂಭಾಗ ಗುರುವಾರ ನಡೆದ ವನ್ಯಜೀವಿ ಸಪ್ತಾಹ ಹಾಗೂ ಕಾಲ್ನಡಿಗೆ ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

“ನನ್ನ ಹುಟ್ಟುಹಬ್ಬದಂದು ಕಬಿನಿ ಹಿನ್ನೀರಿನ ಪ್ರದೇಶ ವೀಕ್ಷಣೆಗೆ ಹೋಗಿದ್ದೆ. ನಾನು ಅಲ್ಲಿ ಕಂಡ ಪ್ರಾಕೃತಿಕ ಸಂಪತ್ತು ಎಲ್ಲಿಯೂ ಇಲ್ಲ. ಕೇವಲ ಒಂದು ಗಂಟೆ ಅಂತರದಲ್ಲಿ ಇನ್ನೂರಕ್ಕೂ ಹೆಚ್ಚು ಆನೆಗಳನ್ನು ನೋಡಿದೆ. ಹುಲಿ, ಜಿಂಕೆಗಳು ನಮ್ಮ ಪ್ರಾಕೃತಿಕ ಆಸ್ತಿಗಳು” ಎಂದರು.

“ರಂಗನತಿಟ್ಟು ವಿಶೇಷವಾದ ಪಕ್ಷಿಗಳ ದ್ವೀಪ ಎನ್ನಬಹುದು. ದೇಶ, ವಿದೇಶಗಳ ಹಕ್ಕಿಗಳು ಇಲ್ಲಿ ಕಂಡುಬರುವುದೇ ಅತ್ಯಂತ ವಿಶೇಷ ಸಂಗತಿ. ನಾವೆಲ್ಲರೂ ಈ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು. ಆದ ಕಾರಣಕ್ಕೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ” ಎಂದರು.

“ಅನಿಲ್ ಕುಂಬ್ಳೆಯವರು ಅಂತರಾಷ್ಟ್ರೀಯ ಕ್ರಿಕೆಟಿಗರಾಗಿ ದೊಡ್ಡ ಹೆಸರು ಮಾಡಿದವರು. ನಿವೃತ್ತಿಯ ನಂತರ ವನ್ಯಜೀವಿಗಳ ಉಳಿವುಗಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ” ಎಂದರು.

“ಅನಿಲ್ ಕುಂಬ್ಳೆಯವರಂತೆ ಎಲ್ಲರೂ ಪ್ರಾಕೃತಿಕ ಸಂಪತ್ತನ್ನು ಉಳಿಸುತ್ತೇನೆ ಎಂದು ಸಂಕಲ್ಪ ಮಾಡಬೇಕು. ಒಬ್ಬರು ಹದಿನಾರು ಜನರಲ್ಲಿ ಜಾಗೃತಿ ಮೂಡಿಸುವೆ ಎಂದು ಸಂಕಲ್ಪ ತೊಡಬೇಕು.‌ ನಮ್ಮ ಸಂಪತ್ತು ನಾವೇ ಉಳಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

“ಕರ್ನಾಟಕ ಅರಣ್ಯ ಹಾಗೂ ಪ್ರಕೃತಿ ಸಂಪತ್ತನ್ನು ಹೇರಳವಾಗಿ ಹೊಂದಿರುವ ನಾಡು. ಹಿರಿಯರು ನಮ್ಮ ಪ್ರಕೃತಿಯನ್ನು ದೇವರು ಎಂದು ಪೂಜಿಸುತ್ತಿದ್ದರು. ಈ ಮೊದಲು ಪ್ರತಿಯೊಂದು ಮನೆಯ ಬಳಿಯೂ ಸಣ್ಣ ತೋಟವನ್ನು ನಾವುಗಳು ಹೊಂದಿರುತ್ತಿದ್ದೆವು. ಈಗ ಅಪಾರ್ಟ್‌ಮೆಂಟ್ ಸಂಸ್ಕೃತಿಯಿಂದ ಕೈತೋಟದ ಕಲ್ಪನ ಕಣ್ಮರೆಯಾಗುತ್ತಿದೆ” ಎಂದು ಬೇಸರಿಸಿದರು.

“ಜಿಬಿಎ ಪಾಲಿಕೆ ವ್ಯಾಪ್ತಿಯ ಶಾಲೆಗಳು ಒಂದೊಂದು ವಲಯಗಳನ್ನು ‌ಆಯ್ಕೆ ಮಾಡಿ ಮಕ್ಕಳಿಂದ ಗಿಡಗಳನ್ನು ಬೆಳೆಸಬೇಕು. ಕಳೆದ ಎರಡು ವರ್ಷಗಳಲ್ಲಿ 1 ಲಕ್ಷ ಸಸಿಗಳನ್ನು ನೆಟ್ಟು ಕಾಪಾಡಿದ ಇತಿಹಾಸ ನಮ್ಮದಾಗಿದೆ. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಸಹಕಾರ‌‌ ಸದಾ ಇರುತ್ತದೆ” ಎಂದರು.


Spread the love

LEAVE A REPLY

Please enter your comment!
Please enter your name here