ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಕೃತಿ ಚಿಕಿತ್ಸೆ ಎಂಬುದು ಮಾನವನ ದೇಹ, ಮನಸ್ಸು ಮತ್ತು ಆತ್ಮ ಸಮತೋಲನದ ಮೇಲೆ ಆಧಾರಿತವಾದ ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿ.ಪಿ, ಶುಗರ್, ಹೃದಯರೋಗ ಸಾಮಾನ್ಯ ಕಾಯಿಲೆಯಾಗಿದೆ. ಅದರೊಂದಿಗೆ ಮಧುಮೇಹ ಕೂಡ ಸೇರಿಕೊಂಡಿದೆ. ಫಾಸ್ಟ್‌ಫುಡ್, ಬೇಕರಿ ತಿನಿಸುಗಳಿಂದ ದೂರವಿರಬೇಕು. ಪ್ರಕೃತಿ ಮನುಷ್ಯನ ಜೀವಾಳವೇ ಆಗಿದ್ದು, ಪ್ರಕೃತಿ ಚಿಕಿತ್ಸೆಯಿಂದ ತೊಂದರೆಯಿಲ್ಲ ಹಾಗೂ ದುಶ್ಚಟಗಳಿಂದ ದೂರವಿದ್ದಲ್ಲಿ ಉತ್ತಮ ಆರೋಗ್ಯ ನಮ್ಮದಾಗುವದರಲ್ಲಿ ಸಂಶಯವಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಅಗಡಿ ಸನ್‌ರೈಸ್ ಹಾಸ್ಪಿಟಲ್, ಕೆ.ಎಚ್. ಪಾಟೀಲ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಹುಲಕೋಟಿ, ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘ ಲಕ್ಷ್ಮೇಶ್ವರ ಮತ್ತು ಇನ್ನರ್‌ವೀಲ್ ಕ್ಲಬ್ ಲಕ್ಷ್ಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಗಡಿ ಸನ್‌ರೈಸ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹುಲಕೋಟಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ. ಸತೀಶ ಹೊಂಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯ ಪಂಚಭೂತಗಳಾದ ಮಣ್ಣು, ನೀರು, ವಾಯು, ಅಗ್ನಿ ಮತ್ತು ಆಕಾಶ ಇವುಗಳ ಸಮತೋಲನದ ಮೇಲೆ ಮನುಷ್ಯನ ಆರೋಗ್ಯ ನಿರ್ಧಾರವಾಗುತ್ತದೆ. ಯುವ ಜನತೆ ದುಶ್ಚಟಗಳಿಂದ ದೂರ ಇರಬೇಕು. ಅಲ್ಲದೆ ವಾರಕ್ಕೆ ಒಮ್ಮೆಯಾದರೂ ಉಪವಾಸ ಮಾಡಲೇಬೇಕು. ಇದು ದೇಹದ ರಕ್ಷಣೆಗೆ ಅಗತ್ಯ. ಅದರೊಂದಿಗೆ ಮಿತಾಹಾರ ಸೇವನೆಯೇ ಆರೋಗ್ಯದ ಗುಟ್ಟು. ಪರಿಸರದಲ್ಲಿ ಮಣ್ಣು, ನೀರು, ಗಾಳಿ ಇವುಗಳು ಸರಿಯಾಗಿದ್ದಲ್ಲಿ ಆರೋಗ್ಯವು ಸರಿಯಾಗಿರುತ್ತದೆ. ಒತ್ತಡ ರಹಿತ ಜೀವನ, ಯೋಗ, ಸಾತ್ವಿಕ ಆಹಾರ ಮೈಗೂಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಕೃತಿಯ ನಿಯಮದಿಂದ ಮನುಷ್ಯ ದೂರ ಸರಿಯುತ್ತಿರುವದರಿಂದ ರೋಗ-ರುಜಿನಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಡಾ. ಪಿ.ಡಿ. ತೋಟದ, ಇನ್ನರ್‌ವೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಮಾಲಾದೇವಿ ದಂದರಗಿ, ಡಾ. ಸುಜಾತಾ ಸಂಗೂರ, ಡಾ. ಎಸ್.ಜಿ. ಹೂವಿನ, ಡಾ. ಶಿವಾನಂದ ಹೂವಿನ, ಡಾ. ಬೆಳವಿಗಿ, ಡಾ. ಸಿ.ಆರ್. ಕಲಿವಾಳಮಠ, ಐ.ಎಸ್. ಮಡಿವಾಳರ, ಅಗಡಿ ಆಸ್ಪತ್ರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಡಾ. ಶೃತಿ ಹೂವಿನ, ಚನ್ನಪ್ಪ ಕೋಲಕಾರ ಸೇರಿದಂತೆ ಅನೇಕರಿದ್ದರು. ಆಡಳಿತಾಧಿಕಾರಿ ಶ್ರೀಕಾಂತ ಪಾಟೀಲ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಡಿಮಠ, ಚಂಬಣ್ಣ ಬಾಳಿಕಾಯಿ, ಅಗಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಶೇಖರ ಮೂಲಿಮನಿ ಮಾತನಾಡಿದರು.



