ವಿಜಯಸಾಕ್ಷಿ ಸುದ್ದಿ, ಗದಗ: ಕುಡಿಯುವ ನೀರಿನ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಕಾರ್ಯಗಳ ಪಟ್ಟಿ ತಯಾರು ಮಾಡಲಾಗಿದೆ. ಶೀಘ್ರವೇ ನಿಯಮಿತ ನೀರು ಪೂರೈಕೆಗೆ ಸೂಚಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಕುರಿತಂತೆ ಸಭೆ ಜರುಗಿಸಿ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸದ್ಯಕ್ಕೆ ಗದಗ ನಗರಕ್ಕೆ 10 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂಚಿನ 10 ದಿನಗಳೊಳಗಾಗಿ ನೀರು ಪೂರೈಕೆ ಪ್ರಮಾಣವನ್ನು ಪ್ರತಿ ದಿವಸಕ್ಕೆ ಪೂರೈಸಲು ಕ್ರಮ ವಹಿಸಲಾಗುವುದು. ಮುಂಬರುವ ಫೆಬ್ರವರಿ ಅಂತ್ಯಕ್ಕೆ 4 ದಿವಸಕ್ಕೊಮ್ಮೆ ನೀರು ಸರಬರಾಜು ಮಾಡಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ನೀರು ಪೂರೈಕೆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ. ನಗರದ ತಿಲಕ್ ಪಾರ್ಕ್ನಲ್ಲಿ ಓವರ್‌ಹೆಡ್ ಟ್ಯಾಂಕ್ ಸ್ವಚ್ಛತೆಯ ಕಾರ್ಯ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಪಾತ್ರದ ಕೊರ್ಲಹಳ್ಳಿ ಮತ್ತು ಗಂಗಾಪೂರ ಗ್ರಾಮಗಳ ವ್ಯಾಪ್ತಿಯ ನೀರು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿ, ಜಿಲ್ಲಾಡಳಿತ ಈಗಾಗಲೇ ತಾಲೂಕಾಡಳಿತ ಮತ್ತು ಸಂಬAಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸದರಿ ವಿಷಯದ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಲಾಗಿತ್ತು. ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಿರುವ ಅಂಶಗಳನ್ನು ಪತ್ತೆಹಚ್ಚಲು ನದಿ ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರೀಕ್ಷಿಸಿದ್ದು, ಸದರಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ವರದಿ ನೀಡಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ವಿಜಯನಗರ ಶುಗರ್ ಪ್ರೈವೆಟ್ ಲಿಮಿಟೆಡ್‌ನವರು ಕಾರ್ಖಾನೆಯ ತ್ಯಾಜ್ಯವನ್ನು ನದಿಗೆ ಬಿಡುಗಡೆ ಮಾಡದಂತೆ ನಿರ್ಬಂಧಿಸಿದ್ದಾರೆ. ಈ ಕುರಿತು ಸ್ಥಳ ಪರಿಶೀಲನೆಗೆ ಜಿಲ್ಲಾಧಿಕಾರಿಗಳ ಹಂತದಲ್ಲಿ ತಂಡ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆತಂಕ ಪಡುವ ಅವಶ್ಯತೆ ಇಲ್ಲವೆಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ಲಕ್ಕುಂಡಿಯು ಶಿಲ್ಪಕಲೆಯ ತೊಟ್ಟಲು ಎಂದರೆ ಅತಿಶಯೋಕ್ತಿಯಲ್ಲ. ದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ಧಚಿತ್ರವು ಆಯ್ಕೆಯಾಗಿದ್ದು, ಪೂರ್ವ ಸಿದ್ಧತೆ ಅಂತಿಮ ಹಂತದಲ್ಲಿದೆ. ಇದು ಗದಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿ ತರಲ ಸರಕಾರ ನಿರ್ಧರಿಸಿದೆ. ಮುಂದಿನ ಅಧಿವೇಶನದಲ್ಲಿಯೇ ವಿಧೇಯಕ ಮಂಡಿಸಲಾಗುವುದು. ಬಡವರ, ಮಧ್ಯಮ ವರ್ಗದವರ ಶೋಷಣೆ ತಡೆಗಟ್ಟುವುದು ಹಾಗೂ ಅವರನ್ನು ಸಂರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ.
– ಎಚ್.ಕೆ. ಪಾಟೀಲ.
ಗದಗ ಉಸ್ತುವಾರಿ ಸಚಿವರು.