ಧಾರವಾಡ: ಜಿಲ್ಲೆಯ ಹಾಗೂ ನಾಗರಿಕ ಸುರಕ್ಷತೆ, ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಅವರ ನಿರ್ದೇಶನದ ಅನುಸಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಭಯ, ಅನಗತ್ಯ ಬೆಲೆ ಹೆಚ್ಚಳ, ಕೃತಕ ಅಭಾವ ಸೃಷ್ಟಿ ಬಗ್ಗೆ ಇಲಾಖೆ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಸೋಮವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ವಿದೇಶಿ ದಾಳಿ ಸಂದರ್ಭದಲ್ಲಿ ಜಿಲ್ಲೆಯ ನಾಗರಿಕರ ರಕ್ಷಣಾ ಕಾರ್ಯ ಚಟುವಟಿಕೆಗಳ ಕುರಿತು ಪರಾಮರ್ಶಿಸಿ, ಮಾತನಾಡಿದರು.
ಅಧಿಕಾರಿಗಳು ಜನನಿಬಿಡ ಪ್ರದೇಶಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಖಾತರಿಸಿಕೊಳ್ಳಬೇಕು. ಆಹಾರ ಉತ್ಪನ್ನಗಳ ಬೆಲೆ ಹೆಚ್ಚಳ, ಕೃತಕ ಅಭಾವ ಸೃಷ್ಟಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅನಗತ್ಯವಾಗಿ ಆಹಾರ ಉತ್ಪನ್ನಗಳು ಸಂಗ್ರಹವಾಗದಂತೆ, ಸಾರ್ವಜನಿಕರಲ್ಲಿ ಯಾವುದೇ ಗೊಂದಲಗಳು ಉಂಟಾಗದAತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಭಯ, ಆತಂಕ, ಸುಳ್ಳು ಸುದ್ದಿ, ಕಮ್ಯುನಲ್ ಸಂದೇಶಗಳು ಹರಡದಂತೆ ನಿಗಾ ವಹಿಸಬೇಕು. ಅಂತಹ ಸಂದೇಶಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆ ಅಗತ್ಯ ಕಾನೂನು ಕ್ರಮ ಜರುಗಿಸಿ, ಸಂದೇಶಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಕಂದಾಯ, ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಸಾರಿಗೆ, ಗೃಹರಕ್ಷಕ ಸೇರಿದಂತೆ ಪ್ರಮುಖ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ನಾಗರಿಕರ ಹಾಗೂ ಪ್ರಮುಖ ಸ್ಥಳಗಳ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮಹಾನಗರ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನು ಕಾವಲಿಗೆ ನೇಮಿಸಲಾಗಿದೆ. ಜಿಲ್ಲಾಡಳಿತದ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಶಾಂತಿ, ಸುವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ್ ಬರಮಣಿ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ವೇದಿಕೆಯಲ್ಲಿದ್ದರು. ಸಭೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ, ಆಯಿಲ್ ಕಂಪನಿಗಳ, ಕೈಗಾರಿಕೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಪೊಲೀಸ್ ಅಧೀಕ್ಷಕ ಡಾ. ಗೋಪಾಲ್ ಎಂ.ಬ್ಯಾಕೋಡ ಮಾತನಾಡಿ, ಜಿಲ್ಲೆಯ ಅಂತರಗಡಿ ಸ್ಥಳಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 9 ಚೆಕ್‌ಪೋಸ್ಟ್ ಸ್ಥಾಪಿಸಿ, ಶಸ್ತ್ರಸಜ್ಜಿತ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸಂಶಯಾಸ್ಪದ ವಾಹನಗಳ ತಪಾಸಣೆ ಮಾಡಲಾಗುತ್ತದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಸಾರ್ವಜನಿಕ ಶಾಂತಿಬಂಗವಾಗದಂತೆ, ಯಾವುದೇ ಅಪರಾಧ ಚಟುವಟಿಕೆಗಳು ಜರುಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.