ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡಿರುವ ಅಗತ್ಯ ಸಿದ್ಧತೆಗಳನ್ನು ತಹಸೀಲ್ದಾರ, ಬಿಇಓ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಪರಿಶೀಲಿಸಿದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ 14 ಸರಕಾರಿ, 8 ಅನುದಾನಿತ, 11 ಅನುದಾನರಹಿತ ಸೇರಿದಂತೆ ಒಟ್ಟು 33 ಪ್ರೌಢಶಾಲೆಗಳಿವೆ. ತಾಲೂಕಿನಲ್ಲಿ ಲಕ್ಷ್ಮೇಶ್ವರದ ಪುರಸಭೆ ಉಮಾ ವಿದ್ಯಾಲಯ, ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆ, ಬಿಸಿಎನ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಪುಟಗಾಂವ್‌ಬಡ್ನಿ, ಎಸ್‌ಎಸ್‌ಕೆ ಪ್ರೌಢಶಾಲೆ ಶಿಗ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆ ಬಾಲೆಹೊಸೂರು ಹೀಗೆ ಒಟ್ಟು 6 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಒಟ್ಟು 33 ಪ್ರೌಢಶಾಲೆಗಳಿಂದ ಸುಮಾರು 1591 ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಹಾಗೂ ಬಾಹ್ಯ ವಿದ್ಯಾರ್ಥಿಗಳು, ಖಾಸಗಿ ಬಾಹ್ಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1630 ವಿದ್ಯಾರ್ಥಿಗಳು ವಿವಿಧ ಕೇಂದ್ರದಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅತಿ ಎಚ್ಚರಿಕೆಯಿಂದ ಹಾಗೂ ಜಾಗರೂಕತೆಯಿಂದ ನಿರ್ವಹಿಸುವ ನಿಟ್ಟಿನಲ್ಲಿ ಅನೇಕ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಅದರಲ್ಲಿ ಪರೀಕ್ಷಾ ಕೇಂದ್ರಗಳಿಗೆ ಅಧೀಕ್ಷರಾಗಿ 6, ಕಸ್ಟೋಡಿಯನ್ 6, ಸ್ಥಾನಿಕ ಜಾಗೃತದಳ 6, ಮಾರ್ಗಾಧಿಕಾರಿ 3, ಮೊಬೈಲ್ ಸ್ವಾಧೀನಾಧಿಕಾರಿಗಳು 6, ಕೊಠಡಿ ಮೇಲ್ವಿಚಾರಕರು 115, ಆರೋಗ್ಯ ಇಲಾಖೆ ಸಿಬ್ಬಂದಿಗಳು 12, ಪೊಲೀಸ್ ಸಿಬ್ಬಂದಿಗಳು 12 ಸೇರಿದಂತೆ 166 ಪರೀಕ್ಷಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ 3 ಪರೀಕ್ಷಾ ಕೇಂದ್ರಗಳನ್ನು 1 ಕ್ಲಸ್ಟರ್ ಮಾಡಲಾಗಿದೆ.
ಭಯ ಬಿಟ್ಟು ಪರೀಕ್ಷೆ ಎದುರಿಸಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಅತ್ಯಂತ ಸುಗಮ, ಸರಳ, ಪಾರದರ್ಶಕವಾಗಿ ನಡೆಸಿ ಯಶಸ್ವಿಯಾಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಲು ಶಿಕ್ಷಕರು ಸಾಕಷ್ಟು ಶ್ರಮವಹಿಸಿ ಸಿದ್ಧರನ್ನಾಗಿಸಿದ್ದಾರೆ. ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಪ್ರವೇಶ ಪತ್ರ ತೋರಿಸಿ ಪರೀಕ್ಷಾರ್ಥಿಗಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರದಲ್ಲಿ ವದಂತಿಗಳಿಗೆ ಕಿವಿಗೊಡದಿರಿ. ನಿಮ್ಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಗುರಿಯೊಂದಿಗೆ ಸಾಗಿ. ಯಾವುದೇ ಆತಂಕ ಬೇಡ.
– ಎಚ್. ನಾಣಕಿ ನಾಯ್ಕ್.
ಕ್ಷೇತ್ರ ಶಿಕ್ಷಣಾಧಿಕಾರಿ.