ಜಿಲ್ಲಾ ಪ್ರವಾಸೋದ್ಯಮಕ್ಕೆ ಅಗತ್ಯಾನುಸಾರ ಅನುದಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ಪ್ರವಾಸಿಗರು ಸಂಚರಿಸುವ ಮಾರ್ಗದ ನೀಲನಕ್ಷೆ ತಯಾರಿಸುವುದು ಸೂಕ್ತ. ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಬಜೆಟ್‌ನಲ್ಲಿ ಘೋಷಣೆಯಂತೆ ರಾಜ್ಯದಲ್ಲಿ 10 ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೆ 50 ಕೋಟಿ ರೂ ಅನುದಾನ ಮೀಸಲಿದೆ. ಬಜೆಟ್‌ನ 5 ಕೋಟಿಯಲ್ಲಿ ಲಕ್ಕುಂಡಿಯಲ್ಲಿ ಮೂಲಭೂತ ಸೌಕರ್ಯ ಮತ್ತು ಇತರೆ ಕ್ಷೇತ್ರಗಳ ಅಭಿವೃದ್ಧಿ ನೀಲನಕ್ಷೆ ತಯಾರಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಆದ್ಯತಾ ಪಟ್ಟಿ ಸಲ್ಲಿಸಬೇಕೆಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ 804 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದ ನೀಲನಕ್ಷೆ ಅನುಸಾರ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದರು.

ಲಕ್ಕುಂಡಿಯ ಕಾಶಿ ವಿಶ್ವನಾಥ ದೇವಾಲಯ ಹತ್ತಿರದಲ್ಲಿ ಪ್ರವಾಸಿಗರ ಮೂಲಭೂತ ಸೌಕರ್ಯಕ್ಕಾಗಿ ಭೂಮಿ ಲಭ್ಯತೆ ಮತ್ತು ಅನುದಾನ ಇದೆ. ಜತೆಗೆ ಗದಗ ಕೊಪ್ಪಳ ಹೆದ್ದಾರಿಯಲ್ಲೂ ಮೂಲಭೂತ ಸೌಕರ್ಯ (ಶೌಚಾಲಯ) ನಿರ್ಮಾಣ ಮಾಡಬಹುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಲಕ್ಕುಂಡಿಯಲ್ಲಿ ಮಾಹಿತಿ ಫಲಕಗಳು ಮತ್ತು ಇತಿಹಾಸ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು 5 ಪುಸ್ತಕ ಪ್ರಕಟನೆ, ಪುನರ್ ಮುದ್ರಣ, ಲಕ್ಕುಂಡಿ ಮಾಹಿತಿ ಕೈಪಿಡಿ ಮುದ್ರಣ ಮತ್ತು ಲಕ್ಕುಂಡಿಗೆ ಸಂಬಂಧಿಸಿದಂತೆ 10 ವಿಡಿಯೋಗಳ ನಿರ್ಮಾಣಕ್ಕೆ 89 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 50 ಲಕ್ಷ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಶೀಘ್ರವೇ ಈ ಕಾರ್ಯವವನ್ನು ಆರಂಭಿಸಲು ಸಚಿವರು ಸೂಚಿಸಿದರು.

ಗೋವಾದಿಂದ ಗದಗ-ಕೊಪ್ಪಳ ಮಾರ್ಗವಾಗಿ ಹಂಪಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಅಧಿಕವಿದೆ. ಹಾಗಾಗಿ ಲಕ್ಕುಂಡಿ ಸಮೀಪದ ಹೆದ್ದಾರಿ ಮಾರ್ಗದಲ್ಲಿ ನಾಮಫಲಕ ಅಳವಡಿಸಲು ಸೂಚಿಸಲಾಯಿತು. ಲಕ್ಕುಂಡಿ ಒಳ ಬರುವ ಮತ್ತು ಹೊರ ಹೋಗುವ ಹೆದ್ದಾರಿಯಲ್ಲಿ ಎರಡು ಪ್ರವೇಶ ದ್ವಾರಗಳ ನಿರ್ಮಾಣದ ವಿಷಯವೂ ಚರ್ಚೆಯಾಯಿತು.

ಸಭೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಜೆ.ಕೆ. ಜಮಾದಾರ, ಆರ್.ಆರ್. ಓದುಗೌಡರ, ವಿವೇಕಾನಂದ ಗೌಡ ಪಾಟೀಲ, ಗೀತಾಂಜಲಿ ರಾವ್, ಅ.ದ. ಕಟ್ಟಿಮನಿ, ಕಿಶೋರ್ ಬಾಬು ನಾಗರಕಟ್ಟಿ ಅವರು ಸಮಗ್ರವಾಗಿ ಚರ್ಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರಿಧರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಕೆ.ವಿ. ರಾಜೇಂದ್ರಕುಮಾರ, ಜಿ.ಪಂ ಸಿಇಓ ಭರತ್ ಎಸ್, ಎಸ್‌ಪಿ ರೋಹನ್ ಜಗದೀಶ, ಡಿಸಿಎಫ್ ಸಂತೋಷ ಕುಮಾರ, ಪ್ರವಾಸೋದ್ಯಮ ಇಲಾಖೆ ಜಂಟಿ ಆಯುಕ್ತ ಶ್ರೀನಿವಾಸ್, ಜಂಟಿ ನಿರ್ದೇಶಕ ಜನಾರ್ಧನ, ಅರಣ್ಯ ವಸತಿ, ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಸಂಖಿಮಠ, ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜ್, ಮಂಜುನಾಥ್ ಚೌಹಾಣ್, ನಾಗರಾಜ್ ಹಂಪಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಸದಸ್ಯ ಸಿದ್ದು ಪಾಟೀಲ, ಅಶೋಕ ಮಂದಾಲಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಟ್ರೇಶ್ವರ ವಿಭೂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವೀರಯ್ಯಸ್ವಾಮಿ, ವಾರ್ತಾಧಿಕಾರಿ ವಸಂತ ಮಡ್ಲೂರ ಮುಂತಾದವರಿದ್ದರು.

ಲಕ್ಕುಂಡಿಯಲ್ಲಿ ಐತಿಹಾಸಿಕ ದೇವಸ್ಥಾನಗಳ ರಕ್ಷಣೆ ಮತ್ತು ಪುನರುಜ್ಜೀವನ ಕುರಿತು 7ರಿಂದ 8 ಮನೆಗಳ ಮೌಲ್ಯವನ್ನು ಗುರುತಿಸಿ, ಪರಿಹಾರ ನೀಡಿ ಸ್ಥಳಾಂತರಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಲಕ್ಕುಂಡಿಯೊಂದಿಗೆ ಕಪ್ಪತಗುಡ್ಡದಲ್ಲಿ ಫುಡ್ ಕಾರ್ನರ್, ಸಫಾರಿ ಆರಂಭಿಸುವ ಮತ್ತು ಬಿಂಕದಟಕ್ಟಿ ಝೂನಲ್ಲಿ ನೈಟ್ ಸಫಾರಿ ಜೀಪ್ ಆರಂಭಿಸುವುದಕ್ಕೆ ಸಚಿವರು ಸೂಚಿಸಿದರು.


Spread the love

LEAVE A REPLY

Please enter your comment!
Please enter your name here