ವಿಜಯಸಾಕ್ಷಿ ಸುದ್ದಿ, ಗದಗ: ಭಕ್ತಿ, ಸೇವೆ, ಶಿಕ್ಷಣ ರಂಗದಲ್ಲಿ ಬಸವಣ್ಣವರ ತತ್ವ-ಸಿದ್ಧಾಂತಗಳನ್ನು ಸಮುದಾಯವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಆದಾಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮೀಷನರ್ ಜಗದೀಶ ಬಳಗಾನೂರ ಹೇಳಿದರು.
ಅವರು ನಗರದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ತಾಲೂಕು ಘಟಕ, ಮಹಿಳಾ ಘಟಕ, ಯುವ ಘಟಕ ಹಾಗೂ ಬಸವ ಭವನ ಕಟ್ಟಡ ಸಮಿತಿ ಆಶ್ರಯದಲ್ಲಿ ಜರುಗಿದ ಬಣಜಿಗ ಸಂಕ್ರಾತಿ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೌಶಲ್ಯತೆ ಬಣಜಿಗರಲ್ಲಿ ಸಾಕಷ್ಟು ಇದೆ. ಆದರೆ ಮಾರ್ಗದರ್ಶನದ ಕೊರತೆಯಿಂದ ಸಮುದಾಯದ ಯುವಕರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಮುದಾಯದ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.
ಶಿಕ್ಷಕಿ ಶಿವಗಂಗಾ ದೂದಗಿ (ರಂಜನಗಿ) ಮಾತನಾಡಿ, ಬಣಜಿಗ ಸಮಾಜಕ್ಕೆ ಶ್ರೀಮಂತ ಇತಿಹಾಸ ಇದೆ. ಎಳ್ಳು ಗಾಣಿಗ ಬಲ್ಲ, ಸುಳ್ಳು ಸಿಂಪಿಗ ಬಲ್ಲ, ಕಳ್ಳರನ್ನು ಬಲ್ಲ ತಳವಾರ ಬಣಜಿಗ ಎಲ್ಲವನು ಬಲ್ಲ ಸರ್ವಜ್ಞ ಎನ್ನುವಂತೆ ಎಲ್ಲಾ ಕೌಶಲ್ಯಗಳು ಇವೆ. ಏಳು ಮುಖ್ಯಮಂತ್ರಿಗಳನ್ನು ಕೊಟ್ಟ ಸಮಾಜ, ಅನೇಕ ರಾಜಕಾರಣಿಗಳು ಇದ್ದಾರೆ. ಕೊಡುಗೈ ದಾನಿಗಳು ತೋಟದ ಎಲೆ ಮಲ್ಲಪ್ಪ ಶೆಟ್ಟರ, ಸಕ್ಕರೆ ಕರಡೀಶ ಯುವಕರ ಸ್ಫೂರ್ತಿ ವಿಜಯ ಸಂಕೇಶ್ವರ ಹೀಗೆ ಅನೇಕರು ನಮ್ಮ ಸಮಾಜದಲ್ಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಐ.ಬಿ. ಕೊಟ್ಟೂರಶಟ್ಟರ, ವೀರಣ್ಣ ಮಳಗಿ, ಕಿರಣ ಭೂಮಾ, ನಾಗೇಶ ಸವಡಿ, ಬಿ.ಬಿ. ಅಸೂಟಿ, ಸುರೇಶ ಬಿ.ಅಂಗಡಿ, ರಾಜಣ್ಣ ಕುರಡಗಿ, ಚೇತನ ಅಂಗಡಿ, ಯಳಮಲಿ, ಸಿ.ಎಸ್. ಗದಗ ಬಸವರಾಜ ಶಿ.ಅಂಗಡಿ, ರವಿಕುಮಾರ ಪಟ್ಟಣಶೆಟ್ಟಿ, ಈಶ್ವರ ಸಿ.ಮುನವಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು. ಸಿ.ವಾಯ್.ಸಿ.ಡಿ ಹರ್ಲಾಪೂರದ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.



