HomeGadag Newsಶಿಷ್ಟಾಚಾರ ಪಾಲನೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಶಿಷ್ಟಾಚಾರ ಪಾಲನೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ವಿಜಯಸಾಕ್ಷಿ ಸುದ್ದಿ, ಗದಗ: “ರಾಜ್ಯಪಾಲರ ಪ್ರವಾಸದ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ನಡೆಯಬಾರದು. ಅಧಿಕಾರಿಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಅವ್ಯವಸ್ಥೆ ಅಥವಾ ಲೋಪ ಕಂಡುಬಂದರೆ ಸಹಿಸಲಾಗುವುದಿಲ್ಲ” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜುಲೈ 23ರಂದು ನಡೆಯಲಿರುವ ಕರ್ನಾಟಕ ರಾಜ್ಯಪಾಲರ ಗಜೇಂದ್ರಗಡ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಹಾಗೂ ಶಿಷ್ಟಾಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯಪಾಲರ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳು ಶಿಷ್ಟಾಚಾರದಂತೆ ಹಾಗೂ ಯಾವುದೇ ಲೋಪವಿಲ್ಲದಂತೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ರಾಜ್ಯಪಾಲರು ಸಂಚರಿಸುವ ಮಾರ್ಗದ ರಸ್ತೆಗಳು ಸಂಪೂರ್ಣ ಸುಸ್ಥಿತಿಯಲ್ಲಿರುವಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ರಸ್ತೆ ಮಾರ್ಗದಲ್ಲಿ ಯಾವುದೇ ಅಡಚಣೆ ಅಥವಾ ಸಂಚಾರ ದಟ್ಟಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಗಜೇಂದ್ರಗಡ ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇರುವುದರಿಂದ ಜನಸಂದಣಿ ನಿಯಂತ್ರಣ, ವಾಹನ ನಿಲುಗಡೆ, ಕುಡಿಯುವ ನೀರು, ಆರೋಗ್ಯ ಸೇವೆ, ಭದ್ರತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ತಿಳಿಸಿದರು. ಅಗತ್ಯವಿದ್ದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ವೇದಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು. ಬ್ಯಾಕಪ್ ವ್ಯವಸ್ಥೆಯನ್ನೂ ಸಿದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಅದೇ ರೀತಿ, ರಾಜ್ಯಪಾಲರ ಭದ್ರತೆ, ಶಿಷ್ಟಾಚಾರ, ವೈದ್ಯಕೀಯ ನೆರವು, ಸ್ವಚ್ಛತೆ, ಕುಡಿಯುವ ನೀರು, ಅಗ್ನಿಶಾಮಕ, ಸಂಚಾರ ನಿಯಂತ್ರಣ ಸೇರಿದಂತೆ ಪ್ರತಿಯೊಂದು ವಿಭಾಗವೂ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಜ್ಯಪಾಲರ ಪ್ರವಾಸದ ವೇಳಾಪಟ್ಟಿಯ ವಿವರಗಳನ್ನೂ ನೀಡಲಾಯಿತು. ಜುಲೈ 23ರಂದು ಬೆಳಿಗ್ಗೆ 9.15ಕ್ಕೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸುವ ರಾಜ್ಯಪಾಲರು, ರಸ್ತೆ ಮಾರ್ಗವಾಗಿ ಬೆಳಿಗ್ಗೆ 10.50ಕ್ಕೆ ಗಜೇಂದ್ರಗಡ ಪ್ರವಾಸಿ ಮಂದಿರಕ್ಕೆ ತಲುಪಲಿದ್ದಾರೆ. ಬಳಿಕ ಬೆಳಿಗ್ಗೆ 11.15ಕ್ಕೆ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2 ಗಂಟೆಗೆ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್‌ಪಿಗಳಾದ ಮಹಾಂತೇಶ್ ಸಜ್ಜನರ ಹಾಗೂ ಮುರ್ತುಜಾ ಖಾದ್ರಿ, ಸಹಾಯಕ ಆಯುಕ್ತ ಗಂಗಪ್ಪ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಿ ರಾಜ್ಯಪಾಲರ ಪ್ರವಾಸವನ್ನು ಯಶಸ್ವಿಗೊಳಿಸಬೇಕು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img