ಚಿತ್ರದುರ್ಗ:- ವೈದ್ಯರ ನಿರ್ಲಕ್ಷದಿಂದ ಕೋಟೆನಾಡು ಚಿತ್ರದುರ್ಗದಲ್ಲಿ ಬಾಣಂತಿ ಸಾವನ್ನಪ್ಪಿದ ಘಟನೆ ಜರುಗಿದೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗದಲ್ಲೂ ನಡೆದಿದೆ. ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ 40 ದಿನದ ಕಂದಮ್ಮನನ್ನು ಅಗಲಿದ್ದು, ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
25 ವರ್ಷದ ರೋಜಮ್ಮ ಮೃತ ಬಾಣಂತಿ. ಅಕ್ಟೋಬರ್ 31ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯೆ ಡಾ.ರೂಪಶ್ರೀ ಸೀಜರಿನ್ ಆಪರೇಷನ್ ಮಾಡಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಐದು ದಿನಗಳ ಬಳಿಕ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ನಿನ್ನೆ ಬೆಳಗ್ಗೆಯಿಂದ ವಾಂತಿ ಶುರುವಾಗಿದೆ. ಹೀಗಾಗಿ, ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೋಜಮ್ಮ ಸಾವನ್ನಪ್ಪಿದ್ದಾರೆ.
ಸೀಜರಿನ್ ಆಪರೇಷನ್ ಸಮರ್ಪಕವಾಗಿ ಆಗದ ಕಾರಣ ಇನ್ಫೆಕ್ಷನ್ ಆಗಿದೆ. ಹೊಲಿಗೆ ಹಾಕಿದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ರೋಜಮ್ಮಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ.