ಆನೇಕಲ್:- ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ದೊಡ್ಡಹಾಗಡೆ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ನಡೆದ ಗಲಾಟೆಯಲ್ಲಿ 45 ವರ್ಷದ ರಾಮಚಂದ್ರಪ್ಪ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಮಚಂದ್ರಪ್ಪ ಸ್ವಂತ ಟ್ರಾಕ್ಟರ್ ಇಟ್ಟುಕೊಂಡಿದ್ದರು. ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ಪಕ್ಕದ ಮನೆಯ ನಿವಾಸಿಗಳ ಜೊತೆ ಗಲಾಟೆಯಾಗಿತ್ತು. ಮಹಿಳೆಯರು ಗುಂಪು ಕಟ್ಟಿಕೊಂಡು ರಾಮಚಂದ್ರಪ್ಪ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ವೇಳೆ ಹಲ್ಲೆಯಿಂದ ರಾಮಚಂದ್ರಪ್ಪ ನೆಲಕ್ಕೆ ಉರುಳಿ ಬಿದ್ದಿದ್ದ. ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಾಮಚಂದ್ರಪ್ಪ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ಮಹಿಳೆಯರು ಪೊಲೀಸರ ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.