ಬೆಂಗಳೂರು:- ನಗರದ ಹೆಚ್‌ಎಎಲ್ ಬಳಿ ತಿರುಪತಿಗೆ ತೆರಳಿದ್ದ ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ದೋಚಿ ನೇಪಾಳಿ ದಂಪತಿ ಎಸ್ಕೇಪ್ ಆಗಿರುವ ಘಟನೆ ಜರುಗಿದೆ. ಹೆಚ್ಎಎಲ್ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿರುವ ರಮೇಶ್ ಬಾಬು ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆ ಕೆಲಸ ಮಾಡುತ್ತಿದ್ದ ರಾಜ್ ಹಾಗೂ ದೀಪಾ ದಂಪತಿ ಮನೆಯಲ್ಲಿದ್ದ 2 ಕೆ.ಜಿ ಚಿನ್ನಾಭರಣ, 10 ಲಕ್ಷ ರೂಪಾಯಿ ನಗದು, ಪರವಾನಗಿ ಹೊಂದಿದ್ದ ಪಿಸ್ತೂಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಉದ್ಯಮಿ ರಮೇಶ್ ಅವರು ಕಳೆದ 3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿಯನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲಸಕ್ಕೆ ಸೇರಿದ ಈ ದಂಪತಿ, ತುಂಬಾ ನಾಜೂಕಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು. ಅಲ್ಲದೇ ಕೆಲವೇ ದಿನಗಳಲ್ಲಿ ಮಾಲೀಕನ ನಂಬಿಕೆಗಳಿಸಿಕೊಂಡಿದ್ದರು. ದಂಪತಿಯ ನಯ-ವಿನಯ ನೋಡಿದ ರಮೇಶ್, ಕುಟಂಬ ಸಮೇತ ಮೇ 27ರಂದು ತಿರುಪತಿಗೆ ಹೊರಟಿದ್ದರು. ಈ ವೇಳೆ ರಾಜ್ ಮತ್ತು ದೀಪಾಗೆ ಮನೆ ಕಡೆಗೆ ನೋಡಿಕೊಳ್ಳಿ ಎಂದು ಹೇಳಿ ತಿರುಪತಿಗೆ ತೆರಳಿದ್ದರು. ತಿರುಪತಿಗೆ ತೆರಳಿದ ಕೆಲವೇ ಗಂಟೆಗಳಲ್ಲಿ ರಮೇಶ್ ಅವರು ತಮ್ಮ ಮನೆಯ ಸಿಸಿಟಿವಿಯನ್ನು ಮೊಬೈಲ್ ಮೂಲಕ ನೋಡಿದಾಗ ಆಫ್ ಆಗಿತ್ತು.
ಬೆಂಗಳೂರಿನಲ್ಲಿ ಮಳೆ ಬರುತ್ತಿರುವುದರಿಂದ ಕರೆಂಟ್ ಹೋಗಿರಬೇಕು ಎಂದು ತಮ್ಮ ಪಾಡಿಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಮಾರನೇ ದಿನ ವಾಪಸು ಆಗಿದ್ದರು. ಈ ವೇಳೆ ಮನೆಯ ಬಾಗಿಲು ತೆರೆದಿತ್ತು. ಈ ವೇಳೆ ಮನೆ ಒಳಗೆ ಹೋಗಿ ಪರಿಶೀಲಿಸಿದಾಗ 2 ಕೆಜಿ ಚಿನ್ನ, 10 ಲಕ್ಷ ರೂ. ನಗದು, ಒಂದು ಲೈಸೆನ್ಸ್ ಹೊಂದಿರುವ ಗನ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.