ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನದಲ್ಲಿಯೂ ನಿರಂತರ ಶ್ರಮವಹಿಸಿ ಅಭ್ಯಾಸಗೈದು, ಪ್ರಥಮ ಸ್ಥಾನವನ್ನು ಎಂದಿಗೂ ಬಿಟ್ಟುಕೊಡಬೇಡಿ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಹಾಗೂ ಪ್ರೊ. ಎಸ್.ವಿ. ಸಂಕನೂರ ಅಭಿಮಾನಿ ಬಳಗ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸನ್ಮಾನಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ವಿದ್ಯೆಯು ಯಾರೊಬ್ಬರ ಸ್ವತ್ತು ಅಲ್ಲ. ಮೂವರು ವಿದ್ಯಾರ್ಥಿನಿಯರು ಬಡ ಕುಟುಂಬದಿಂದ ಬಂದಿದ್ದು, ಪರಿವಾರದ ತೊಂದರೆಗಳನ್ನು ಎದುರಿಸಿ ಉತ್ತಮ ಸಾಧನೆಗೈದು ಗದಗ ಜಿಲ್ಲೆಗೆ ಹಾಗೂ ಕಲಿತ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿಜಯಲಕ್ಷ್ಮೀ ಗೊಂಡಬಾಳ ಕುರಿಗಾರಿಕೆ ಹಾಗೂ 33 ಜನರಿರುವ ಅವಿಭಕ್ತ ಕುಟುಂಬ ಹಿನ್ನೆಲೆಯಿಂದ ಬಂದಿದ್ದರೂ ಉತ್ತಮ ಸಾಧನೆಗೈದಿದ್ದಾಳೆ. ಕಾವ್ಯ ಹಿರೇಗೌಡರ ತಮ್ಮ ತಂದೆಯ ಅನಾರೋಗ್ಯ ಹಾಗೂ ಬಡತನದ ಸ್ಥಿತಿಯಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನವತಿಕಾ ಹಜಾರೆ ಅನೇಕ ಕೌಟುಂಬಿಕ ಕಷ್ಟಗಳಿದ್ದರೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇವರೆಲ್ಲರೂ ತಮ್ಮ ಸಾಧನೆಯನ್ನು ಇಲ್ಲಿಗೆ ನಿಲ್ಲಿಸದೇ ದೃಢ ಸಂಕಲ್ಪ ಹಾಗೂ ಆತ್ಮವಿಶ್ವಾಸದಿಂದ ಮುನ್ನುಗ್ಗಿ, ಐ.ಎ.ಎಸ್, ಕೆ.ಎ.ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಧಿಕಾರಿಗಳಾಗಿ ರೂಪಗೊಳ್ಳಬೇಕೆಂದು ಆಶಿಸಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪ.ಪೂ ಮಹಾವಿದ್ಯಾಲಯದ ನೌಕರರ ಸಂಘದ ಅಧ್ಯಕ್ಷ ಅಶೋಕ ಅಂಗಡಿ ಸ್ವಾಗತಿಸಿದರು. ಜೆ.ಟಿ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಜಿ. ಪಾಟೀಲ ಹಾಗೂ ಕರ್ನಾಟಕ ರಾಜ್ಯ ಪ.ಪೂ ಮಹಾವಿದ್ಯಾಲಯದ ನೌಕರರ ಸಂಘದ ಗೌರವಾಧ್ಯಕ್ಷ ಪವಾಡಿಗೌಡ್ರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಸ್.ಐ. ಮೇಟಿ ವಂದಿಸಿದರು.
ಸಮಾರಂಭದಲ್ಲಿ ಪ್ರಾಚಾರ್ಯರುಗಳಾದ ಜೆ.ಎ. ಸಿರ್ಸಿ, ಡಾ. ಬಿ.ಎಸ್. ರಾಠೋಡ, ಎಸ್.ಎಸ್. ಕುಲಕರ್ಣಿ, ಬಿ.ವಿ. ಪಾಟೀಲ, ಉಪನ್ಯಾಸಕರುಗಳಾದ ಡಾ. ವಾಯ್.ಆರ್. ಬೇಲೇರಿ, ಪ್ರೊ. ಎಸ್.ಎನ್. ಕೌಲಗಿ, ಡಾ. ದತ್ತಪ್ರಸನ್ನ ಪಾಟೀಲ, ಎನ್.ವಿ. ಜೋಷಿ, ಪ್ರೀತಿ ಮೆಣಸಿನಕಾಯಿ ಹಾಗೂ ಪ.ಪೂ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸಂಕನೂರ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಾಣಿಜ್ಯ ವಿಭಾಗದಲ್ಲಿ 592 (ಶೇ.98.66) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನವತಿಕ ಹಜಾರಿ, ವಿಜ್ಞಾನ ವಿಭಾಗದಲ್ಲಿ 590 (ಶೇ.98.33) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾವ್ಯ ಹಿರೇಗೌಡರ ಇವರಿಬ್ಬರೂ ಗದುಗಿನ ಜೆ.ಟಿ. ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ. ಕಲಾ ವಿಭಾಗದಲ್ಲಿ 587 (ಶೇ.97.83) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮುಂಡರಗಿಯ ಜೆ.ಎ. ಪ.ಪೂ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಗೊಂಡಬಾಳ ಹಾಗೂ ಅವರ ಪಾಲಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ವಿ.ಪ ಸದಸ್ಯ ಪ್ರೊ. ಎಸ್.ವಿ. ಸಂಕನೂರ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳ ಸಾಧನೆ ನಿರಂತರವಾಗಿರಬೇಕು. ಜೀವನದಲ್ಲಿ ಬರುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಬೇಕು. ಪಿಯುಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದಂತೆ ಜೀವನದ ಪ್ರತಿ ಹಂತದಲ್ಲಿಯೂ ಯಶಸ್ಸನ್ನು ಗಳಿಸುತ್ತ ಸಾಗಬೇಕು.
– ಸಿ.ಎನ್. ಶ್ರೀಧರ್.
ಜಿಲ್ಲಾಧಿಕಾರಿಗಳು, ಗದಗ.