ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ವಯಸ್ಸು ಇದ್ದಾಗ ವಿದ್ಯೆ, ಶಕ್ತಿಯಿದ್ದಾಗ ಹಣ, ಸಂಸ್ಕಾರದಿಂದ ಜ್ಞಾನ ಸಂಪಾದಿಸಿಕೊಂಡು ಬಾಳಬೇಕು. ಹೇಳುವ ಜ್ಞಾನ, ಮಾಡುವ ಮನಸ್ಸೊಂದಿದ್ದರೆ ಸಾಕು ಸಕಲ ಕಾರ್ಯಗಳು ಸಿದ್ಧಿಸುತ್ತವೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಹುಣ್ಣಿಮೆ ಶ್ರಾವಣ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೇಶದಲ್ಲಿ ರಾಜ, ಸಮಾಜದಲ್ಲಿ ಗುರು, ಪರಿವಾರದಲ್ಲಿ ತಂದೆ, ಮನೆಯಲ್ಲಿ ಸ್ತ್ರೀ ಇವರು ಎಂದಿಗೂ ಸಾಧಾರಣ ವ್ಯಕ್ತಿಗಳಲ್ಲ. ಏಕೆಂದರೆ ಅಭಿವೃದ್ಧಿ ಮತ್ತು ವಿನಾಶ ಇವೆರಡೂ ಇವರ ಕೈಯಲ್ಲಿಯೇ ಇರುತ್ತವೆ. ಯಾವ ವಿಶ್ವಾಸ ಹೋದರೂ ಯೋಚಿಸಬೇಕಾಗಿಲ್ಲ. ಆದರೆ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ದೇಹದ ಅಂದ-ಚೆಂದ ಮರೆಯಾದರೂ ಚಿಂತೆಯಿಲ್ಲ. ಆದರೆ ಮನಸ್ಸು ಮಲಿನಗೊಳ್ಳದೇ ಪರಿಶುದ್ಧವಾಗಿರಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿನ ಬಂಡಿ ಸುಗಮವಾಗಿ ಗುರಿ ತಲುಪಲು ಕೊಟ್ಟ ಚಿಂತನೆಗಳು ಸಕಲರಿಗೂ ಆಶಾಕಿರಣವಾಗಿವೆ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ವ್ಯವಸ್ಥೆ ಬಹಳಷ್ಟು ಕಲುಷಿತಗೊಳ್ಳುತ್ತಿದೆ. ಸಂಸ್ಕಾರ ಮತ್ತು ಸಂಸ್ಕೃತಿಯ ಕೊರತೆ ಇದಕ್ಕೆಲ್ಲ ಕಾರಣವೆಂದರೆ ತಪ್ಪಾಗದು. ಕಿತ್ತು ತಂದಿದ್ದು ಹೊತ್ತು ಮುಳುಗುವವರೆಗೆ ಮಾತ್ರ ಇರುತ್ತದೆ. ನಿಯತ್ತಿನಿಂದ ದುಡಿದು ತಿನ್ನುವುದು ಜೀವನದ ಕೊನೆಯವರೆಗೆ ಇರುತ್ತದೆ ಎಂಬುದನ್ನು ಮರೆಯಬಾರದು.
ನೀರು ಎರೆದವರಿಗೂ ಕಡಿಯಬಂದವರಿಗೂ ಬೇಧ ಎಣಿಸದೇ ಮರ ಹಣ್ಣು-ನೆರಳು ನೀಡುತ್ತದೆ. ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡಲಾಗದಿದ್ದರೂ ಚಿಂತೆಯಿಲ್ಲ. ಆದರೆ ಕೆಡಕು ಬಯಸುವ ಬುದ್ಧಿ ಬರಬಾರದು ಎಂದರು. ಇದೇ ಸಂದರ್ಭದಲ್ಲಿ `ಬಾಳಿಗೆ ಬೆಳಕು’ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ಶ್ರಾವಣ ಧರ್ಮ ಸಮಾರಂಭದಲ್ಲಿ ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಶಿವಯೋಗ ಸಾಧಕರಿಂದ ಭಕ್ತಿ ಗೀತೆ ಜರುಗಿತು.
ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಬಾಳೆಹೊನ್ನೂರು ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯಿಂದ ಆಗಮಿಸಿದ ಸಹೋದರಿಯರು ಜಗದ್ಗುರುಗಳಿಗೆ ರಕ್ಷಾ ಬಂಧನ ಕಟ್ಟಿ ಗೌರವ ಸಲ್ಲಿಸಿದರು.
ಬೆಳಿಗ್ಗೆ ಶ್ರೀ ಪೀಠದ ಎಲ್ಲ ದೈವಗಳಿಗೆ ಹುಣ್ಣಿಮೆ ಅಂಗವಾಗಿ ಪೂಜೆ, ಹೂವಿನ ಅಲಂಕಾರ ಮಾಡಲಾಗಿತ್ತು. ಲೋಕಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳವರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸಿದರು. ಶಿಗ್ಗಾಂವಿ ತಾಲೂಕಿನ ಕಬನೂರ ಗ್ರಾಮಸ್ಥರು ಅನ್ನ ದಾಸೋಹ ನೆರವೇರಿಸಿದರು.
ಸುಖದ ಸಂಪತ್ತು ಅನುಭವಿಸಬೇಕಾದರೆ ಕಷ್ಟದ ಅರಿವು ತಿಳಿದಿರಬೇಕಾಗುತ್ತದೆ. ಸಂಸ್ಕಾರ ಹೇಳಲು ಸನ್ಯಾಸ ಬೇಕಾಗಿಲ್ಲ. ಅನುಭಾವ ಹೇಳಲು ಪದವಿ ಬೇಕಾಗಿಲ್ಲ. ಸೇವೆ ಮಾಡಲು ಅಧಿಕಾರ ಅಂತಸ್ತು ಬೇಕಾಗಿಲ್ಲ. ಈ ಸುಂದರ ಜಗತ್ತು ದೇವರು ಸೃಷ್ಟಿಸಿದ ಆಟದ ಮೈದಾನವಿದ್ದಂತೆ. ನಿಯತ್ತಿನಿಂದ ಆಟ ಆಡಿದರೆ ಗೆಲುವು. ನೀತಿ ಮೀರಿ ನಡೆದರೆ ಸೋಲು ಖಚಿತ ಎಂಬುದನ್ನು ಮರೆಯಬಾರದು. ಜೀವನದಲ್ಲಿ ಆಶೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದೆಂದು ನೀತಿ ಸಂಹಿತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ ಎಂದು ಶ್ರೀಗಳು ತಿಳಿಸಿದರು.