ದೇವನಹಳ್ಳಿ: ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ‘ಹೊಸ ಬೆಂಗಳೂರು’ ನಿರ್ಮಿಸಿ ವಿಶ್ವದ ಗಮನ ಸೆಳೆಯುವ ಗುರಿ ನಮ್ಮದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದೇವನಹಳ್ಳಿಯ ಅಂಬಿಕಾ ಲೇಔಟ್‌ನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ನೂತನ ಕಚೇರಿ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗೆ ನೀರು, ರಸ್ತೆ ಹಾಗೂ ನಗರ ಯೋಜನೆಗೆ ಆದ್ಯತೆ ನೀಡಲಾಗುವುದು ಎಂದರು.
ಎತ್ತಿನಹೊಳೆ ಹಾಗೂ ಕಾವೇರಿ ನೀರನ್ನು ದೇವನಹಳ್ಳಿ ಭಾಗಕ್ಕೆ ತರಲು ಪ್ರಯತ್ನಿಸಲಾಗುತ್ತಿದ್ದು, ಮಂತ್ರಿಯಾದ ಬಳಿಕ ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ 6 ಟಿಎಂಸಿ ನೀರನ್ನು ಮೀಸಲಿಟ್ಟಿದ್ದೇನೆ ಎಂದು ತಿಳಿಸಿದರು. ಕೋಲಾರ, ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿಗೆ ನೀರು ಒದಗಿಸುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ ಎಂದರು.
ಕೆರೆಗಳ ಸಂರಕ್ಷಣೆಗೆ ಒತ್ತು ನೀಡುತ್ತಾ, ಯಾವುದೇ ಕಾರಣಕ್ಕೂ ಕೊಳಚೆ ನೀರನ್ನು ಕೆರೆಗಳಿಗೆ ಬಿಡಬಾರದು; ಪ್ರತ್ಯೇಕ ಚರಂಡಿ ವ್ಯವಸ್ಥೆ ಕಡ್ಡಾಯ ಎಂದು ಸೂಚಿಸಿದರು. ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಯಾವುದೇ ಬಡಾವಣೆಯ ರಸ್ತೆಗಳು ಕನಿಷ್ಠ 30–40 ಮೀಟರ್ ಅಗಲ ಇರಲೇಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬೆಂಗಳೂರು ಸುತ್ತಮುತ್ತಲ ಪ್ರದೇಶಗಳನ್ನು ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಸೇರಿಸಲಾಗುವುದು. ಬಿಡದಿ, ಸೋಲೂರು, ನಂದಗುಡಿಯಲ್ಲಿ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆ ಡಿನೋಟಿಫಿಕೇಷನ್ ಆಗುವುದಿಲ್ಲ; ಹೈಕೋರ್ಟ್ ಕೂಡ ಬಿಡಿಎ ಪರವಾಗಿ ಆದೇಶ ನೀಡಿದೆ ಎಂದು ಹೇಳಿದರು. ರೈತರಿಗೆ ಅನುಕೂಲವಾಗುವಂತೆ ಭೂಮಿಗೆ ಉತ್ತಮ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.



