ವಿಜಯಸಾಕ್ಷಿ ಸುದ್ದಿ, ಗದಗ: ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಗದಗ ಜಿಲ್ಲಾ ಕಚೇರಿಯ ನೂತನ ಕಟ್ಟಡ `ಸರ್ ಎಂ. ವಿಶ್ವೇಶ್ವರಯ್ಯ ಟೆಕ್ನಿಕಲ್ ಸೆಂಟರ್’ ಮೇ 25ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಚೇರಮನ್ ಎಂ.ಸಿ. ಐಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೊಂಟದ ಸಿದ್ದರಾಮ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ನೂತನ ಕಟ್ಟಡವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದು ಬೇವೂರ, ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಆಗಮಿಸಲಿದ್ದಾರೆ. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಎಂ.ಪಿ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
1994ರಲ್ಲಿ ಆರಂಭವಾದ ಸಂಘವು, ವೃತ್ತಿ ನಿರತ ಇಂಜಿನಿಯರ್‌ಗಳ ನಡುವೆ ಸ್ನೇಹ ಸೌಹಾರ್ದತೆ, ತಾಂತ್ರಿಕ ವಿಚಾರ ವಿನಿಮಿಯ, ಕಾರ್ಮಿಕರ ಹಾಗೂ ಕಟ್ಟಡ ಕಟ್ಟುವ ಮಾಲೀಕರೊಂದಿಗೆ ಉತ್ತಮ ಬಾಂಧವ್ಯ ಬೆಸೆಯುವ ಕೆಲಸ ಮಾಡುತ್ತಿದೆ. ಕಟ್ಟಡ ಕಾರ್ಮಿಕರು, ಮಾಲೀಕರು ಮತ್ತು ವೃತ್ತಿನಿರತ ಇಂಜಿನಿಯರ್‌ಗಳ ಉಪಯೋಗಕ್ಕಾಗಿ 2 ವರ್ಷಕ್ಕೊಮ್ಮೆ ಗೃಹಶೋಭಾ, ಕಟ್ಟಡ ಸಾಮಗ್ರಿಗಳ ಬೃಹತ್ ಪ್ರದರ್ಶನ ಬಿಲ್ಟ್ಮ್ಯಾಟ್, ತಾಂತ್ರಿಕ ಕೈಪಿಡಿ ಬಿಡುಗಡೆ ಸಹಿತ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿದ್ದು, ಸದ್ಯ ನೂತನ ಕಟ್ಟಡದ ಮೂಲಕ ತಾಂತ್ರಿಕ ಮಾಹಿತಿಯನ್ನು ನೀಡುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್.ಎಂ. ಅಂಗಡಿ, ಬಸವರಾಜ ಮಳ್ಳಣ್ಣವರ, ಎಂ.ಪಿ. ಪಾಟೀಲ, ಎ.ಪಿ. ಕೋಟಿಗೌಡ, ಬಿ.ಆರ್. ಹೊಸಮನಿ, ವಿರೂಪಾಕ್ಷ ನೀಲಗುಂದ, ರಾಜು, ಶಂಕರ ಬಾಕಳೆ, ಎಂ.ಎಸ್. ಗೌಡಪ್ಪಗೌಡ, ರಾಘವೇಂದ್ರ ಭಾಂಡಗೆ ಉಪಸ್ಥಿತರಿದ್ದರು.
ಗದುಗಿನ ರಿಂಗ್ ರೋಡ್ ಸಮೀಪ ಹೆರಕಲ್ ಲೇಔಟ್‌ನಲ್ಲಿ 7 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ 3 ಸಾವಿರ ಚದರ ಅಡಿಯಲ್ಲಿ ದೊಡ್ಡ ಸಭಾಂಗಣ ಹೊಂದಿರುವ ಸುಸಜ್ಜಿತ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಕೇಂದ್ರದ ಮೂಲಕ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನೂತನ ತಾಂತ್ರಿಕತೆಯ ಮಾಹಿತಿ ನೀಡುವ ಕೇಂದ್ರವಾಗಿ ರೂಪಿಸಲಾಗುವುದು ಎಂದು ಎಂ.ಸಿ. ಐಲಿ ವಿವರಿಸಿದರು.