ಹಿಂದೆ ಸಿನಿಮಾ ಕ್ಯಾಸೆಟ್ ಖರೀದಿಸಿದವರಿಗೆ ಬಹುಮಾನ, ಸಿನಿಮಾ ನೋಡಿ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಉಡುಗೊರೆ ಎಂಬ ಸಂಪ್ರದಾಯವಿತ್ತು. ಅದೇ ಶೈಲಿಗೆ ಹೊಸ ರೂಪ ನೀಡಿರುವ ‘ಕೊರಗಜ್ಜ’ ಚಿತ್ರತಂಡ, ಇದೀಗ ಹಾಡುಗಳಿಗೆ ರೀಲ್ಸ್ ಮಾಡಿದವರಿಗೆ ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹೊಟೆಲ್ ಹಾಲಿಡೇ ಇನ್ನಲ್ಲಿ ವಿನೂತನವಾಗಿ ಆಯೋಜಿಸಲಾಗಿತ್ತು. ಬಿಗ್ ಎಫ್ಎಂ 92.7 ಸೇರಿದಂತೆ ಹಲವು ಆಡಿಯೋ ಪ್ಲಾಟ್ಫಾರ್ಮ್ಗಳ ಸಹಯೋಗದಲ್ಲಿ ನಡೆದ “ಸಾಂಗ್ಸ್ ಪ್ರೀಮಿಯರ್” ಕಾರ್ಯಕ್ರಮದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮವೂ ಮಿಶ್ರಣಗೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರತಂಡ, ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಳ್ಳುವವರಿಗೆ ಭರ್ಜರಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ. ಅತ್ಯುತ್ತಮ ರೀಲ್ಸ್ ಆಯ್ಕೆ ಮಾಡಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿಸಿದೆ.
ಕಾರ್ಯಕ್ರಮದಲ್ಲಿ ಆರ್ಜೇಗಳು ಹಾಗೂ ಸಿಬ್ಬಂದಿ ಹಾಡುಗಳನ್ನು ಎಂಜಾಯ್ ಮಾಡಿದರು. ಮಹಿಷಾಸುರ ಯಕ್ಷಗಾನ ಪ್ರದರ್ಶನವೂ ನಡೆಯಿತು. ಹಿರಿಯ ನಟಿ ಭವ್ಯ, ಶರೋನ್ ಪ್ರಭಾಕರ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ನೀಡಿದರು.
ದೈವದ ಕಥೆಯನ್ನು ಆಧರಿಸಿರುವ ‘ಕೊರಗಜ್ಜ’ ಸಿನಿಮಾ ‘ತ್ರಿವಿಕ್ರಮ ಸಿನಿಮಾಸ್’ ಮತ್ತು ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್ಗಳಲ್ಲಿ ಮೂಡಿಬರುತ್ತಿದ್ದು, ಕನ್ನಡದ ಜೊತೆಗೆ ಇತರೆ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ.



