ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಿನಾದ್ಯಾಂತ ಅನ್ನದಾತರ ಹಬ್ಬ ಎಳ್ಳ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಕೈಕೊಟ್ಟರೂ ಸಹ ಎಳ್ಳ ಅಮವಾಸ್ಯೆ ಹಬ್ಬದ ಮೇಲೆ ಪರಿಣಾಮ ಬೀರಿಲ್ಲ. ಜಮೀನುಗಳಲ್ಲಿ ಬೆಳೆಯಲಾದ ಬೆಳೆಗಳಿಗೆ ನಮಿಸಿದ ರೈತರು ವಿಶೇಷ ಪೂಜೆಯನ್ನು ಸಲ್ಲಿಸಿ ಚರಗ ಚೆಲ್ಲಿದರು. ಜಮೀನುಗಳಲ್ಲಿರುವ ಬನ್ನಿ ಮರಕ್ಕೂ ಸಹ ಪೂಜೆಯನ್ನು ಸಲ್ಲಿಸಿ ಬೆಳೆಗಳು ಹುಲುಸಾಗಿ ಬರಲಿ ಎಂದು ಪ್ರಾರ್ಥಿಸಿದರು.
ಹಬ್ಬದ ನಿಮಿತ್ತ ರೈತರು ಎತ್ತಿನ ಬಂಡಿಗಳಿಗೆ ಅಲಂಕಾರ ಮಾಡಿ ಜಮೀನುಗಳಿಗೆ ತೆರಳುತ್ತಿರುವ ದೃಶ್ಯ ಗ್ರಾಮೀಣ ಭಾಗಗಳಲ್ಲಿ ಕಂಡುಬಂದಿತು. ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರೂ ಸೇರಿಕೊಂಡು ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.



