ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿ : ಎಚ್.ಕೆ. ಪಾಟೀಲ

0
New policy for tourism development
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹೊಸ ಪ್ರವಾಸೋದ್ಯಮ ನೀತಿಯ ಮೂಲಕ ಕರ್ನಾಟಕವನ್ನು ದೇಶದ ಅಗ್ರ 3 ಪ್ರವಾಸೋದ್ಯಮ ರಾಜ್ಯಗಳ ಪೈಕಿ ಒಂದಾಗಿಸುವ ಗುರಿ ಹೊಂದಲಾಗಿದೆ. ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವೇಗ ನೀಡುವ ಉದ್ದೇಶದಿಂದ ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲ ಸ್ತರಗಳ ಪ್ರವಾಸಿಗರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿಯನ್ನು ರಚಿಸಲಾಗಿದೆ. ಇದಕ್ಕೆ ಸರಕಾರವೂ ಅನುಮೋದನೆ ನೀಡಿದೆ. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಮುಖ್ಯವಾಗಿ ಸಾಹಸ ಪ್ರವಾಸೋದ್ಯಮ, ಕರಾವಳಿ, ಬೀಚ್, ಪಾರಂಪರಿಕ, ಪರಿಸರ, ಶೈಕ್ಷಣಿಕ, ಒಳನಾಡಿನ ಜಲ ಪ್ರವಾಸೋದ್ಯಮ, ಗಣಿಗಾರಿಕೆ ಪ್ರವಾಸೋದ್ಯಮ, ಬುಡಕಟ್ಟು ಹೀಗೆ ಒಟ್ಟು 25 ವಿಷಯಾಧಾರಿತ ಕ್ಷೇತ್ರಗಳನ್ನು ಗುರುತಿಸಲಾಗಿದೆ.

ಇದನ್ನು ಯಶಸ್ವಿಗೊಳಿಸಲು 44 ಯೋಜನೆಗಳನ್ನು ನೀತಿಯಲ್ಲಿ ಅಳವಡಿಸಲಾಗಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಯಾವ ಸ್ಥಾನದಲ್ಲಿದೆಯೋ ಅದಕ್ಕಿಂತ ಮೇಲೆಕ್ಕೆ ಹೋಗಬೇಕು ಎನ್ನುವ ಗುರಿ ಹೊಂದಿದ್ದೇವೆ. ಸದ್ಯ 26-30 ಕೋಟಿ ಜನರು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಆ ಪ್ರಮಾಣ 48 ಕೋಟಿಗೆ ಏರಿಕೆಯಾಗಬೇಕು. ಅದೇ ರೀತಿ ಸದ್ಯ 10-12 ಲಕ್ಷ ವಿದೇಶ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅದು 20 ಲಕ್ಷಕ್ಕೆ ಏರಿಕೆಯಾದಾಗ ಕರ್ನಾಟಕ ದೇಶದ ಟಾಪ್ 3 ಪ್ರವಾಸಿ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ವಿವರಿಸಿದರು.

ಹೊಸ ಪ್ರವಾಸೋದ್ಯಮ ನೀತಿ ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅಗತ್ಯವಾಗಿದೆ. ಪ್ರವಾಸಿಗರ ಜೊತೆ ಜನರ ಸ್ನೇಹಪರ ವ್ಯವಹಾರ ಮತ್ತು ಸಹಭಾಗಿತ್ವದಿಂದಲೇ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.

1924ರಲ್ಲಿ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಮಹಾತ್ಮ ಗಾಂಧೀಜಿ ಆ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಳ್ಳುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪವನ್ನೇ ಬದಲಾಯಿಸಿದರು. ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆ ನೀಡುವ ಸಮಾವೇಶವಾಗಿ ಬದಲಾಗಿದ್ದರಿಂದ ಆ ಸಮಾವೇಶಕ್ಕೆ ಐತಿಹಾಸಿಕ ಮಹತ್ವವಿದೆ. ಮಹಾತ್ಮ ಗಾಂಧೀಜಿ ಭೇಟಿಯ ಶತಮಾನೋತ್ಸವವನ್ನು ವರ್ಷಪೂರ್ತಿ ಆಚರಿಸಲು ನಿರ್ಧಸಲಾಗಿದೆ. ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ 30 ಜನರ ಸಮಿತಿ ರಚಿಸಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನಕ್ಕೆ ಅಮೆರಿಕಾದ ಮಾಜಿ ಪ್ರಧಾನಿ ಬರಾಕ್ ಓಬಾಮಾ ಅವರನ್ನು ಆಹ್ವಾನಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ, ಎಸ್.ಎನ್. ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ, ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ, ಕಪ್ಪತಗುಡ್ಡದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಯಬಾರದು ಎಂದು ಜಿಲ್ಲೆಯ ಜನ ತೀರ್ಮಾನ ಮಾಡಿದ್ದಾರೆ. ಆದರೂ ಕೆಲವರು ಗಣಿಗಾರಿಕೆಗೆ ಅನುಮತಿ ಕೋರಿದ್ದಾರೆ. ವನ್ಯಜೀವಿ ಮಂಡಳಿ ಸಭೆಯಲ್ಲಿ ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಮಂತ್ರಿಗಳು ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here