ನಟಿ ಕಾವ್ಯ ಗೌಡ ಹಾಗೂ ಪ್ರೇಮಾ ಕುಟುಂಬದ ನಡುವಿನ ಕೌಟುಂಬಿಕ ಕಲಹ ಇದೀಗ ಕಾನೂನು ಹಾದಿಯಲ್ಲಿ ತೀವ್ರ ಸ್ವರೂಪ ಪಡೆದಿದೆ. ರಾಮಮೂರ್ತಿನಗರ ಪೊಲೀಸರು ಪ್ರಕರಣದ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು, ಸತ್ಯಾಸತ್ಯತೆ ತಿಳಿಯಲು ಸಾಕ್ಷ್ಯಗಳ ಬೆನ್ನತ್ತಿದ್ದಾರೆ.
ಪೊಲೀಸರಿಗೆ ದೊರಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ವಿರುದ್ಧವೇ ಹೆಚ್ಚು ಪುರಾವೆಗಳು ಲಭ್ಯವಾಗುತ್ತಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಕಾವ್ಯ ಗೌಡ ತಮ್ಮ ಮೇಲೆ ಚಾಕು ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರೂ, ಇದಕ್ಕೆ ಸಂಬಂಧಿಸಿದ ಯಾವುದೇ ದೃಢ ಸಾಕ್ಷ್ಯಗಳು ಸದ್ಯ ಪತ್ತೆಯಾಗಿಲ್ಲ. ಚಾಕುವೂ ವಶಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಆರೋಪಗಳನ್ನು ಸಮರ್ಥಿಸಲು ಪುರಾವೆ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.
ಇತ್ತ, ಪ್ರೇಮಾ ಅವರು ಪೊಲೀಸರಿಗೆ ಸಲ್ಲಿಸಿರುವ ವಿಡಿಯೋ ಮತ್ತು ಫೋಟೋ ಪುರಾವೆಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ನಟಿಯ ಮನೆಗೆ ಭೇಟಿ ನೀಡಿ ಸ್ಥಳ ಮಹಜರು, ಸಿಸಿಟಿವಿ ದೃಶ್ಯಗಳ ವಶಪಡಿಕೆ ಮತ್ತು ಪರಿಶೀಲನೆ, ಮನೆ ಸಿಬ್ಬಂದಿಗಳ ವಿಚಾರಣೆ, ಸೋಮಶೇಖರ್ ಆರೋಗ್ಯ ಸುಧಾರಿಸಿದ ನಂತರ ವಿಚಾರಣೆ ನಡೆಸಲಿದ್ದಾರೆ.
ಒಟ್ಟಿನಲ್ಲಿ, ಈ ಪ್ರಕರಣ ಇದೀಗ ಕೇವಲ ಕುಟುಂಬ ಕಲಹವಾಗಿಲ್ಲ; ಇದು ಕಾನೂನು ಮತ್ತು ಪುರಾವೆಗಳ ಆಧಾರದ ಮೇಲೆ ನಿರ್ಣಯಗೊಳ್ಳುವ ಗಂಭೀರ ಪ್ರಕರಣವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಸಂಗತಿಗಳು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.



