ವಿಜಯಸಾಕ್ಷಿ ಸುದ್ದಿ, ಗದಗ : ದಿ. ಪ್ರಧಾನಿ ಇಂದಿರಾ ಗಾಂಧಿ ಅವರು ಮೊಟ್ಟಮೊದಲ ಬಾರಿಗೆ ವೃದ್ಧಾಪ್ಯ ವೇತನ ಆರಂಭಿಸಿದರು. ಅಂದಿನಿಂದ ಇಂದಿಗೂ ಕೂಡ ವೃದ್ಧಾಪ್ಯ ವೇತನ ಮುಂದುವರಿದಿದ್ದು, ಬಡವರಿಗೆ ಆಧಾರವಾಗಿದೆ. ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ನಾವು ಮುಂದುವರಿಯುತ್ತಿದ್ದೇವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ 17 ಹಾಗೂ 18ನೇ ವಾರ್ಡಿನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಪ್ರತ್ಯೇಕ ಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡಜನರ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಮಹಿಳೆಯರು ಕೈಗಡ ಸಾಲ ಮಾಡುವುದನ್ನು ನಿಲ್ಲಿಸಿದ್ದಾರೆ. ಪ್ರತಿ ಮನೆಯ ಮಹಿಳೆಯರು ಕಾಂಗ್ರೆಸ್ ಪರವಾಗಿದ್ದಾರೆ. ಮನೆ ಯಜಮಾನ ಯಾವ ಪಕ್ಷಕ್ಕೆ ಮತ ಹಾಕಿದರೂ, ಮಹಿಳೆಯರು ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವುದಾಗಿ ತಿಳಿಸುತ್ತಿದ್ದಾರೆ. ಕಾಂಗ್ರೆಸ್ ಪರ ಹೊಸ ಅಲೆಯೊಂದು ಆರಂಭವಾಗಿದೆ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, 17ನೇ ವಾರ್ಡಿನ ಸದಸ್ಯ ಮುನ್ನಾ ರೇಷ್ಮಿ, 18ನೇ ವಾರ್ಡಿನ ಸದಸ್ಯ ಜೂನಸಾಬ್ ನಮಾಜಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮೌಲಾನಾ, ಇಮಾಮಸಾಬ್ ಕಾಗದಗಾರ, ಮುಖಂಡರಾದ ಶಿವಮೂರ್ತಪ್ಪ ಅಗಸಿಮನಿ, ರಾಜು ಬದಿ, ರುಸ್ತುಂಸಾಬ್ ಪಠಾಣ, ಪ್ರೇಮನಾಥ ಗರಗ, ಮಲ್ಲೇಶ ಆದೋನಿ, ಮಂಜುನಾಥ ಅಗಸಿಮನಿ, ರಾಘವೇಂದ್ರ ರಾಂಪೂರ, ಗಂಗಾಧರ ನೆಳಗಾವಮಠ ಸೇರಿ ಅನೇಕರು ಇದ್ದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಈ ಭಾಗದಲ್ಲಿ ಮತಯಾಚನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವ ಕಾರ್ಯ ಮಾಡಲಾಗುತ್ತಿದೆ. ತಾವೆಲ್ಲರೂ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.


