ಕೊಪ್ಪಳ: ಹೆರಿಗೆ ವೇಳೆ ನವಜಾತ ಶಿಶುವಿನ ಕರುಳು ಹೊರಗೆ ಬಂದಿದ್ದ ಗಂಭೀರ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಶಿಶು ಮೃತಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದ ಶಿಶು ನಿನ್ನೆ ರಾತ್ರಿ ಅಸುನೀಗಿದೆ.
ಕುಕನೂರ ತಾಲೂಕಿನ ಗುತ್ತೂರ ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಮತ್ತು ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ ಹುಟ್ಟುವ ವೇಳೆಯಲ್ಲೇ ಶಿಶುವಿನ ಕರುಳೆಲ್ಲ ಹೊರಗಡೆ ಬಂದಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.
ಶಿಶುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗುವನ್ನು ಕೊಪ್ಪಳದಿಂದ ಹುಬ್ಬಳ್ಳಿಗೆ ಐದು ಆಂಬ್ಯುಲೆನ್ಸ್ಗಳ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ರವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸಹ ಸಹಕಾರ ನೀಡಿದ್ದರು.
ನವಜಾತ ಶಿಶುವಿಗೆ ಕಿಡ್ನಿ ಸಮಸ್ಯೆಯೂ ಇರುವುದಾಗಿ ವೈದ್ಯರು ತಿಳಿಸಿದ್ದರು. ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಿಶುವನ್ನು ಉಳಿಸಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನವಜಾತ ಶಿಶುವಿನ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಶೋಕ ವಾತಾವರಣ ಆವರಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.



