ಚಿಕ್ಕಬಳ್ಳಾಪುರ: ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿಯ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಗ್ರಾಮದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಮೂರು ದಿನಗಳ ಕಾಲ ‘ಕರಾಳ ದಿನ’ ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದಲ್ಲಿ ಶೋಕಭಾವನೆ ಮೇಳೈಸಿದೆ.
‘ಬೇಬಿ ಅಪ್ ಇರಾನ್’ ಎಂದು ಕರೆಯಲ್ಪಡುವ ಅಲೀಪುರ ಗ್ರಾಮಕ್ಕೆ 1986ರಲ್ಲಿ ಅಯಾತೊಲ್ಲಾ ಅಲಿ ಖಮೇನಿ ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಅವರ ಹೆಸರಿನಲ್ಲಿ ಗ್ರಾಮದಲ್ಲೇ ಒಂದು ಆಸ್ಪತ್ರೆ ಕೂಡ ಇದೆ. ಖಮೇನಿ ಅವರಿಗೆ ಇಲ್ಲಿನ ಜನರಲ್ಲಿ ವಿಶೇಷ ಪೂಜ್ಯಭಾವವಿದೆ.
ಗ್ರಾಮದ ಕೆಲವರು ಧಾರ್ಮಿಕ ಶಿಕ್ಷಣಕ್ಕಾಗಿ ಇರಾನ್ನಲ್ಲಿ ನೆಲೆಸಿದ್ದು, ಕೆಲವು ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇರಾನ್ನಲ್ಲಿ ಯುದ್ಧದಂತಹ ಪರಿಸ್ಥಿತಿ ಉಂಟಾದಾಗಲೆಲ್ಲಾ ಅಲೀಪುರದ ಜನರಲ್ಲಿ ಆತಂಕ ಮನೆ ಮಾಡುತ್ತದೆ. ಇದೀಗ ಖಮೇನಿ ಸಾವಿನ ಸುದ್ದಿ ಗ್ರಾಮವನ್ನು ಸ್ತಬ್ಧಗೊಳಿಸಿದೆ.



