ತುಮಕೂರು:- ಮಧುಗಿರಿ ಉಪವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ದೂರು ನೀಡಲು ಬಂದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಗೃಹ ಸಚಿವ ಜಿ. ಪರಮೇಶ್ವರ್ ತವರು ಜಿಲ್ಲೆಯಲ್ಲೇ ಈ ಹೇಯ ಕೃತ್ಯ ನಡೆದಿದ್ದು, ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತೆ ಮಾಡಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆ ಪಾವಗಡದಿಂದ ಡಿವೈಎಸ್ಪಿ ಕಚೇರಿಗೆ ಬಂದಿದ್ದರು. ಮಹಿಳೆಯನ್ನು ಏಕಾಂತ ಕೊಠಡಿಗೆ ಕರೆದುಕೊಂಡು ಹೋದ ಡಿವೈಎಸ್ಪಿ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ.
ಡಿವೈಎಸ್ಪಿ ಕಚೇರಿಗೆ ಮಹಿಳೆಯ ಜೊತೆ ಆಗಮಿಸಿದ್ದ ಅನಿಲ್ ಎಂಬಾತನು ವಿಡಿಯೋ ಸೆರೆ ಹಿಡಿದಿದ್ದಾರೆ ಎಂದು ಶಂಕಿಸಲಾಗಿದೆ. ಬಳಿಕ, ವಾಟ್ಸ್‌ಅಪ್ ಮೂಲಕ ವಿಡಿಯೋ ವೈರಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ತುಮಕೂರು ಎಸ್ಪಿ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ನಾನೂ ಸಹ ವಿಡಿಯೋ ವೀಕ್ಷಣೆ ಮಾಡಿದ್ದೇನೆ. ಈ ವಿಚಾರ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಯಾವುದೇ ಕಾರಣಕ್ಕೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇಲಾಖೆ ಸಹಿಸಿಕೊಳ್ಳಲ್ಲ. ಮಹಿಳೆಯನ್ನು ಪತ್ತೆ ಹಚ್ಚಲಾಗುತ್ತಿದ್ದು, ಅವರು ದೂರು ನೀಡಿದಲ್ಲಿ ಡಿವೈಎಸ್ಪಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಎಸ್ಪಿ ಅಶೋಕ್ ಹೇಳಿದ್ದಾರೆ.