ವಿಜಯಸಾಕ್ಷಿ ಸುದ್ದಿ, ಧಾರವಾಡ : ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗದಲ್ಲಿ, ಪತ್ರಿಕೆಗಳು ಸದಾ ತಿಳುವಳಿಕೆ ನೀಡುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ಅಭಿಪ್ರಾಯಪಟ್ಟರು.
ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಭಾಂಗಣದಲ್ಲಿ ಗುರುವಾರ ಪತ್ರಕರ್ತ ದಿ.ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಧಾರವಾಡದಲ್ಲಿ ಮುರುಘಾಮಠದ ಉಚಿತ ಪ್ರಸಾದ ನಿಲಯ, ಕವಿವಿಯಲ್ಲಿ ನಿರಂತರ ಓದಿನ ಮೂಲಕ ಸಾವಿರಾರು ಜನ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಏರಿದ್ದನ್ನು ಸ್ಮರಿಸಿದ ಅವರು, ಪತ್ರಕರ್ತ ಮೊಹರೆ ಹಣಂತರಾಯರು ಕಾಲು ಶತಮಾನ ಕಾಲ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಸಂಪಾದಕರಾಗಿ ಭದ್ರ ಬುನಾದಿ ಹಾಕಿದವರು. ವಯಕ್ತಿಕ ಜೀವನವನ್ನು ಸಂಪೂರ್ಣವಾಗಿ ಪತ್ರಿಕೆಗೆ ಅರ್ಪಿಸಿದವರು ಮತ್ತು ಕರ್ನಾಟಕ ವಿವಿ ಸ್ಥಾಪನೆಗೆ, ಬೆಳವಣಿಗೆಗೆ ಶ್ರಮಿಸಿದವರು ಎಂದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಉತ್ತರಿಸಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಸಮಾಜದಲ್ಲಿ ತಮ್ಮ ಸುತ್ತ-ಮುತ್ತ ಇರುವ ಕುಂದು ಕೊರತೆಗಳ ಬಗ್ಗೆ ಪತ್ರಿಕೆಗಳಿಗೆ ಪತ್ರ, ಲೇಖನ ಬರೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಪ್ರಬುದ್ಧ ಪತ್ರಕರ್ತರಾಗಿ ಹೊರಹೊಮ್ಮಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಷಣ್ಮುಖ ಕೋಳಿವಾಡ ದಂಪತಿಗಳನ್ನು ಶಾಲು ಹೊದೆಸಿ ಫಲಫುಷ್ಪ ನೀಡಿ ಸನ್ಮಾನಿಸಲಾಯಿತು. ಡಾ.ನಯನಾ ಗಂಗಧರಪ್ಪ ವೇದಿಕೆಯಲ್ಲಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವಿಚಾರಗಳನ್ನು ಇಟ್ಟುಕೊಂಡು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು ಎಂದರು.
ಡಾ.ಸಂಜಯ ಕುಮಾರ ಮಾಲಗತ್ತಿ ಸ್ವಾಗತಿಸಿದರು. ಡಾ.ಶಕುಂತಲಾ ಸೊರಟೂರ, ಡಾ. ನಾಗರಾಜ ರೋಣದ, ಪತ್ರಕರ್ತರಾದ ಸುನಿಲ ಪಾಟೀಲ, ರವೀಶ ಪವಾರ, ಪ್ರೊ. ನೀಲಗುಂದ ಉಪಸ್ಥಿತರಿದ್ದರು. ಡಾ.ಮಂಜುನಾಥ ಅಡಿಗಲ್ ಕಾರ್ಯಕ್ರಮ ನಿರೂಪಿಸಿದರು.
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ವೈಫಲ್ಯಗಳನ್ನು ಎತ್ತಿ ತೋರಿಸುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಪ್ರಾದೇಶಿಕ ಅಸಮಾನತೆ ಹಾಗೂ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಪರ ಕೆಲಸ ಮಾಡುತ್ತಿವೆ ಎಂದು ಷಣ್ಮುಖ ಕೋಳಿವಾಡ ನುಡಿದರು.