ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈ ನಾಡಿನ ಅನೇಕ ಮಠಗಳು ಅನ್ನ, ಅಕ್ಷರ, ದಾಸೋಹಕ್ಕೆ ಹೆಸರಾಗಿದ್ದರೆ, ನಿಡಗುಂದಿಕೊಪ್ಪದ ಶ್ರೀಮಠವು ಆರೋಗ್ಯ ದಾಸೋಹಕ್ಕೆ ಹೆಸರಾಗಿದೆ ಎಂದು ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪದಲ್ಲಿ ಶನಿವಾರ ಜರುಗಿದ ಶ್ರೀ ಚನ್ನಬಸವೇಶ್ವರರ 42ನೇ ಮತ್ತು ಶ್ರೀ ಶಿವಬಸವ ಸ್ವಾಮಿಗಳ 10ನೇ ಪುಣ್ಯಸ್ಮರಣೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಮಠವನ್ನು ಸ್ಥಾಪಿಸಿದ ಹಾನಗಲ್ಲ ಗುರು ಕುಮಾರೇಶ್ವರರು ಈ ಭಾಗದ ಜನರ ಆರೋಗ್ಯವನ್ನು ಕಾಪಾಡಲೆಂದೇ ಶ್ರೀ ಚನ್ನಬಸವ ಮಹಾಸ್ವಾಮಿಗಳಿಗೆ ಅನುಗ್ರಹಿಸಿ ಶಿವಯೋಗ ಮಂದಿರದಿಂದ ಇಲ್ಲಿಗೆ ತಂದಿರಿಸಿದರು. ಅವರಿಂದ ಈ ಮಠವು ಆರೋಗ್ಯ ದಾಸೋಹಿ ಮಠವೆಂಬ ಅಭಿದಾನವನ್ನು ಪಡೆದು ಇಂದಿಗೂ ಆ ಸೇವೆಯನ್ನು ಮುಂದುವರೆಸಿಕೊಂಡು ಬಂದಿದೆ. ಇದನ್ನೇ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಬಸವ ಮಹಾಸ್ವಾಮಿಗಳು ಮುನ್ನಡೆಸಿಕೊಂಡು ಬಂದು ಮಠದ ಕೀರ್ತಿಯನ್ನು ಬೆಳೆಸಿದರು ಎಂದರು.
ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮಿಗಳು ಆಶೀರ್ವಚನ ನೀಡಿ, ಈ ಮಠಕ್ಕೆ ತನ್ನದೇ ಆದ ಮಹತ್ವವಿದೆ. ಶ್ರೀಗುರು ಕುಮಾರೇಶ್ವರರು ಹೆಚ್ಚಿಗೆ ಭೇಟಿ ನೀಡಿದ ಗ್ರಾಮವಿದು. ತಪಸ್ಸಿನ ಶಕ್ತಿ ಮತ್ತು ಭಕ್ತರ ಗೆದ್ದ ಮಠಗಳು ನಿಜವಾದ ಶ್ರೀಮಂತ ಮಠಗಳು. ಈ ಮಠ ಅಂತಹ ಮಠಗಳಲ್ಲೊಂದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಚನ್ನಬಸವ ಮಹಾಸ್ವಾಮಿಗಳು ಕಾಮಧೇನು, ಕಲ್ಪವೃಕ್ಷವಾಗಿದ್ದರು. ಅನ್ನ ಪ್ರಸಾದಕ್ಕಿರುವಷ್ಟೇ ಮಹತ್ವ ಜ್ಞಾನ ಪ್ರಸಾದಕ್ಕಿದೆ. ಅದಕ್ಕೂ ಮಿಗಿಲಾದದ್ದು ಆರೋಗ್ಯ ಪ್ರಸಾದ. ಅದನ್ನು ಈ ಮಠ ನೀಡಿ ಜನಮಾನಸದಲ್ಲಿ ಆರೋಗ್ಯದ ಮಠವೆಂದು ಪ್ರಸಿದ್ಧಿಯನ್ನು ಪಡೆದಿದೆ. ಜಾತ್ರಾಮಹೋತ್ಸವದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸುತ್ತಿರುವುದ ಶ್ಲಾಘನೀಯ. ಜಾತ್ರೆಗಳಲ್ಲಿ ಕಲೆ, ಸಾಹಿತ್ಯ, ಸಂಗೀತಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಅದಕ್ಕೆ ಈ ಮಠ ಹೆಸರುವಾಸಿಯಾಗಿದೆ. ಏಕೆಂದರೆ ಇಲ್ಲಿ ಹಾನಗಲ್ಲ ಕುಮಾರೇಶ್ವರರ ಮತ್ತು ಪಂ. ಪಂಚಾಕ್ಷರ ಗವಾಯಿಗಳವರ ಕೃಪೆ ಇದೆ ಎಂದರು.
ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಮಾತನಾಡಿದರು. ಮುಖಂಡ ವೀರಣ್ಣ ಶೆಟ್ಟರ ವೇದಿಕೆಯ ಮೇಲಿದ್ದರು. ದ್ಯಾಮಣ್ಣ ಮಾಸ್ತರ, ಅನ್ನಪೂರ್ಣಾ ಮನ್ನಾಪೂರ, ಗೀತಾ ಭೋಪಳಾಪೂರ ಮತ್ತು ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ಶಿಕ್ಷಕ ಆರ್.ವಿ. ಬೆಲ್ಲದ ನಿರೂಪಿಸಿದರು. ಎಸ್.ಎಸ್. ಹಿರೇಮಠ ಆಶಯ ನುಡಿಗಳನ್ನಾಡಿದರು.
ಪೀಠಾಧಿಪತಿಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಇನ್ನು ಕೆಲವೇ ದಿನಗಳಲ್ಲಿ ಶ್ರೀಮಠದಿಂದ ಚನ್ನಚೇತನ ಗುರುಕುಲ ಶಾಲೆ ಪ್ರಾರಂಭವಾಗಲಿದೆ. ಇಲ್ಲಿ 90 ದಿನಗಳ ಉಚಿತ ಹೊಲಿಗೆ ತರಬೇತಿಯೂ ನಡೆಯುತ್ತಿದೆ. ಈ ಎಲ್ಲದರ ಪ್ರಯೋಜನವನ್ನು ಆಸಕ್ತರು ಪಡೆದುಕೊಳ್ಳಬೇಕೆಂದರು.



