ಮಲೇಷ್ಯಾದ ಸರವಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ ತಂಡವು ಐತಿಹಾಸಿಕ ಜಯ ಸಾಧಿಸಿದೆ.
ಈಗಾಗಲೇ ಕ್ರಿಕೆಟ್ ಅಂಗಳದಲ್ಲಿ ತನ್ನದೇ ಛಾಪು ಹೊತ್ತಿರುವ ನ್ಯೂಝಿಲೆಂಡ್ ತಂಡವನ್ನು ಮಣಿಸುವ ಮೂಲಕ ಎಂಬುದು ವಿಶೇಷ ಎನ್ನಲಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು.
ಮಳೆ ಹಿನ್ನೆಲೆ ತಲಾ 13 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಜೀರಿಯಾ ಪರ ನಾಯಕಿ ಲಕ್ಕಿ ಪೈಟಿ 18 ರನ್ ಬಾರಿಸಿದರೆ, ಲಿಲಿಯನ್ ಉದೆ 19 ರನ್ ಕಲೆಹಾಕಿದರು. ಈ ಮೂಲಕ ನೈಜೀರಿಯಾ ತಂಡವು 13 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತು. 13 ಓವರ್ಗಳಲ್ಲಿ 66 ರನ್ಗಳ ಸುಲಭ ಗುರಿ ಪಡೆದ ನ್ಯೂಝಿಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಎಮ್ಮಾ ಮೆಕ್ಲಿಯೋಡ್ 3 ರನ್ಗಳಿಸಿ ಔಟಾದರೆ, ಕೇಟ್ ಇರ್ವಿನ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಇನ್ನು ಈವ್ ವೊಲ್ಯಾಂಡ್ 14, ಅನಿಕಾ ಟಾಡ್ 19 ಹಾಗೂ ಕಿವೀಸ್ ತಂಡದ ನಾಯಕಿ ತಾಶ್ ವಾಕೆಲಿನ್ 18 ರನ್ ಬಾರಿಸಿದರು. ಪರಿಣಾಮ ನ್ಯೂಝಿಲೆಂಡ್ ತಂಡವು 12 ಓವರ್ಗಳ ಮುಕ್ತಾಯದ ವೇಳೆಗೆ 57 ರನ್ ಕಲೆಹಾಕಿತು.
ಕೊನೆಯ 6 ಎಸೆತಗಳಲ್ಲಿ ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ ಎಸೆದ ಲಿಲಿಯನ್ ಉದೆ ಕೇವಲ 6 ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ 2 ರನ್ಗಳ ರೋಚಕ ಜಯದೊಂದಿಗೆ ನೈಜೀರಿಯಾ ಅಂಡರ್-19 ತಂಡವು ಐಸಿಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಈ ಮೂಲಕ ಬಲಿಷ್ಠ ಕಿವೀಸ್ ಪಡೆಗೆ ದೊಡ್ಡ ಆಘಾತವನ್ನು ನೀಡಿದೆ.